ನ್ಯೂಸ್

ಕೇವಲ 5 ರೂಪಾಯಿಗೆ 40 ಕಿ.ಮೀ! ವಿನೂತನ ಬ್ಯಾಟರಿ ಬೈಸಿಕಲ್​ಗೆ ಜನರು ಫಿದಾ

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಇಂಧನ ದರ ಜನರಿಗೆ ಬಲು ಭಾರವಾಗಿದ್ದು, ವಿದ್ಯುತ್​ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಇಷ್ಟೇ ಅಲ್ಲದೆ, ಅನೇಕರು ಕೂಡ ಹೊಸ ಹೊಸ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಇದೀಗ ಅಂಥದ್ದೇ ಹೊಸ ಸಂಶೋಧನೆಯ ಫಲವಾಗಿ ಬ್ಯಾಟರಿ ಚಾಲಿತ ಬೈಸಿಕಲ್​ ತಯಾರಿಯಾಗಿದೆ.

ಕೇವಲ 5 ರೂಪಾಯಿಯಲ್ಲಿ ಬರೋಬ್ಬರಿ 40 ಕಿ.ಮೀ ದೂರವನ್ನು ಬ್ಯಾಟರಿ ಚಾಲಿತ ಸೈಕಲ್​ನಿಂದ ಕ್ರಮಿಸಬಹುದು. ಇದನ್ನು ಹೈದರಬಾದ್​ ಮೂಲದ ಸಾಫ್ಟ್​ವೇರ್​ ಇಂಜಿನಿಯರ್​ ಓರ್ವ ತಯಾರಿಸಿದ್ದು, ಈತನ ವಿನೂತನ ಬೈಸಿಕಲ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ನಗರದಲ್ಲಿ ವಾಯಮಾಲಿನ್ಯ ಹೆಚ್ಚಾಗಿದ್ದು, ಅದನ್ನು ಕಡಿಮೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಬೈಸಿಕಲ್​ ಕಂಡುಹಿಡಿದಿರುವ ಅಬ್ದುಲ್​ ಅಜೀಮ್​ ತಿಳಿಸಿದ್ದಾರೆ.

ಅಬ್ದುಲ್​ ಅಜೀಮ್​ ಅವರು ಹೈದರಾಬಾದ್​ನ ವೆಂಗಲಾ ರಾವ್​ ನಗರದವರು. ನಗರದಲ್ಲಿ ಹೆಚ್ಚಾದ ವಾಹನಗಳಿಂದ ವಾಯುಮಾಲಿನ್ಯವೂ ದುಪ್ಪಟ್ಟಾಗುತ್ತಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಬ್ದುಲ್​ ಅಜೀಮ್, ಪರಿಸರಕ್ಕೆ ಉಪಯುಕ್ತ ಕೊಡುಗೆ ನೀಡುವ ಉದ್ದೇಶದಿಂದಲೇ ಬ್ಯಾಟರಿ ಚಾಲಿತ ಬೈಸಿಕಲ್​ ಕಂಡುಹಿಡಿದಿದ್ದಾರೆ. ತಮ್ಮ ಕಾಲನಿಯಲ್ಲಿ ವಾಸವಿದ್ದ ಪ್ರಮುಖ ವಿಜ್ಞಾನಿ ರಘುನಂದನ್​ ಅವರ ಸಲಹೆಗಳನ್ನು ಪಡೆದುಕೊಂಡು ಬೈಸಿಕಲ್​ ಸಂಶೋಧಿಸಿದ್ದಾರೆ.

ಮನೆಯಲ್ಲಿದ್ದ ಹಳೆಯ ಸೈಕಲ್​ ತೆಗೆದುಕೊಂಡ ಅಬ್ದುಲ್​ ಅಜೀಮ್​, ಅದಕ್ಕೆ 250 ವ್ಯಾಟ್​ ಬಿಎಲ್​ಡಿಸಿ ಮೋಟರ್​, 18 ಎಎಚ್​​ ವೋಲ್ಟ್​ ಸಾಮರ್ಥ್ಯದ ಎ ಬ್ಯಾಟರಿ, ಲೈಟ್​, ಹಾರ್ನ್​ ಮತ್ತು ಆಕ್ಸಿಲರೇಟರ್​ ಮತ್ತು ಇತರೆ ಬಿಡಿಭಾಗಗಳನ್ನು ಜೋಡಿಸಿ ಬ್ಯಾಟರಿ ಚಾಲಿತ ಬೈಸಿಕಲ್​ ಅನ್ನು ಅಜೀಮ್​ ತಯಾರಿಸಿದ್ದಾರೆ.

ಬೈಸಿಕಲ್​ಗಾಗಿ 6,500 ಸಾವಿರ ರೂ. ಅನ್ನು ಅಜೀಮ್​ ಖರ್ಚು ಮಾಡಿದ್ದಾರೆ. ಹೆಚ್ಚು ಹಣ ಖರ್ಚಾಗಲಿದೆ ಎಂದು ಮೊದಲೇ ತಿಳಿದಿದ್ದ ಅಜೀಮ್​ ಹೊಸ ಬ್ಯಾಟರಿಯ ಬದಲಾಗಿ ಸೆಕೆಂಡ್​ ಹ್ಯಾಂಡ್​ ಬ್ಯಾಟರಿಗಳನ್ನು ಖರೀದಿಸಿ ಅಳವಡಿಸಿದ್ದಾರೆ. ಎಲ್ಲ ಕೆಲಸ ಮುಗಿದ ಬಳಿಕ ರಸ್ತೆ ಮೇಲೆ ಪ್ರಯೋಗವನ್ನು ಮಾಡಿದ್ದು, ಬೈಸಿಕಲ್​ ಕಾರ್ಯನಿರ್ವಹಿಸುವುದನ್ನು ನೋಡಿ ಹಲವರ ಹುಬ್ಬೇರಿದೆ.

5 ರೂಪಾಯಿ ಚಾರ್ಜ್​ ಮಾಡಿದರೆ 40 ಕಿ.ಮೀ ವರೆಗೆ ಚಲಿಸುತ್ತದೆ. ಅಲ್ಲದೆ, ಪೆಡಲ್​ ಕೂಡ ಇದ್ದು, ಬ್ಯಾಟರಿ ಆಫ್​ ಆದಾಗ ಅದನ್ನು ಉಪಯೋಗಿಸಬಹುದು. ಅಜೀಮ್​ ಅವರು ಪ್ರತಿದಿನ ಕಚೇರಿಗೆ ಅದರಲ್ಲೇ ತೆರಳುತ್ತಾರೆ. ಪೆಟ್ರೋಲ್​-ಡೀಸೆಲ್​ ವಾಹನಗಳನ್ನು ಅವಲಂಬಿಸದೇ ಪರಿಸರ ಸ್ನೇಹಿ ವಾಹನಗಳನ್ನು ಬಳಸಿ ಎಂದು ಅಜೀಮ್​ ಜನರಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)