ವಾಷಿಂಗ್ಟನ್: ತಳೀಯವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು 57 ವರ್ಷದ ವ್ಯಕ್ತಿಗೆ ಅಳವಡಿಸುವಲ್ಲಿ ಯುಎಸ್ ಸರ್ಜನ್ಗಳು ಯಶಸ್ವಿಯಾಗಿದ್ದಾರೆ. ಅಂಗ ದಾನಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಐತಿಹಾಸಿಕ ವೈದ್ಯಕೀಯ ಪ್ರಕ್ರಿಯೆಯು ಶುಕ್ರವಾರ ನಡೆದಿರುವುದಾಗಿ ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ಯೂನಿವರ್ಸಿಟಿ ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ರೋಗಿಯ ಆರೋಗ್ಯ ಸ್ಥಿತಿ ತಿಳಿಯಲು ಇನ್ನು ತುಂಬಾ ಸಮಯ ಬೇಕಾಗಿದ್ದು, ಸದ್ಯದ ಮಟ್ಟಿಗೆ ಪ್ರಾಣಿಯಿಂದ ಮಾನವ ಕಸಿಯು ಪ್ರಮುಖ ಮೈಲಿಗಲ್ಲಾಗಿದೆ.
ಡೇವಿಡ್ ಬೆನೆಟ್ ಎಂಬ ರೋಗಿಯನ್ನು ಮಾನವ ಕಸಿ ಮಾಡಲು ಅನರ್ಹ ಎಂದು ಪರಿಗಣಿಸಲಾಗಿತ್ತು. ಆತನ ಆರೋಗ್ಯ ತೀವ್ರ ಹದಗೆಟ್ಟಿತ್ತು. ಆ ಬಳಿಕವಷ್ಟೇ ಹಂದಿ ಹೃದಯ ಅಳವಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ ನಡೆದಿದ್ದು, ಹೊಸ ಅಂಗ ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಕೊಳ್ಳಲು ಹತ್ತಿರದಿಂದ ರೋಗಿಯ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಅಂದಹಾಗೆ ಹೃದಯ-ಶ್ವಾಸಕೋಶದ ಬೈಪಾಸ್ ಮೆಷಿನ್ ಸಮಸ್ಯೆಯಿಂದ ಕಳೆದ ಹಲವು ತಿಂಗಳುಗಳಿಂದ ಬೆನೆಟ್ ಹಾಸಿಗೆ ಹಿಡಿದಿದ್ದಾರೆ. ಈ ಕಸಿಯನ್ನು ಮಾಡಿ. ನಾನು ಬದುಕಲು ಬಯಸಿದ್ದೇನೆ. ಇದೇ ನನ್ನ ಕೊನೆಯ ಅವಕಾಶ ಎಂದು ಮೇರಿಲ್ಯಾಂಡ್ ನಿವಾಸಿ ಸರ್ಜರಿಗೂ ಮುನ್ನ ದಿನ ಕೊನೆಯದಾಗಿ ಹೇಳಿಕೆ ನೀಡಿದ್ದಾರೆ. ನಾನು ಚೇತರಿಸಿಕೊಂಡ ನಂತರ ಹಾಸಿಗೆಯಿಂದ ಹೊರಬರಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಆಹಾರ ಮತ್ತು ಔಷಧ ಮಂಡಳಿಯು ಹೊಸ ವರ್ಷದ ಮುನ್ನಾ ದಿನದಂದು ಶಸ್ತ್ರಚಿಕಿತ್ಸೆಗೆ ತುರ್ತು ಅಧಿಕಾರವನ್ನು ನೀಡಿತು, ಸಾಂಪ್ರದಾಯಿಕ ಕಸಿಗೆ ಸೂಕ್ತವಲ್ಲದ ರೋಗಿಗೆ ಕೊನೆಯ ಪ್ರಯತ್ನವಾಗಿ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಲಾಯಿತು. ಇದು ಅದ್ಭುತ ಶಸ್ತ್ರಚಿಕಿತ್ಸೆಯಾಗಿದ್ದು, ಅಂಗಗಳ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ನಮ್ಮನ್ನು ಒಂದು ಹೆಜ್ಜೆ ಹತ್ತಿರಕ್ಕೆ ತರುತ್ತದೆ" ಎಂದು ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆಯಿಂದ ಕಸಿ ಮಾಡಿದ ಬಾರ್ಟ್ಲಿ ಗ್ರಿಫಿತ್ ತಿಳಿಸಿದ್ದಾರೆ.
ಚಿಕಿತ್ಸೆಯ ಬಳಿಕವು ನಾವು ಎಚ್ಚರಿಕೆಯಿಂದ ಮುಂದುವರಿಯುತ್ತಿದ್ದೇವೆ. ಆದರೆ, ಪ್ರಪಂಚದ ಮೊದಲ ಶಸ್ತ್ರಚಿಕಿತ್ಸೆಯು ಭವಿಷ್ಯದಲ್ಲಿ ರೋಗಿಗಳಿಗೆ ಪ್ರಮುಖವಾದ ಹೊಸ ಆಯ್ಕೆಯನ್ನು ಒದಗಿಸುತ್ತದೆ ಎಂದು ನಾವು ಆಶಾವಾದಿಗಳಾಗಿದ್ದೇವೆ ಎಂದು ಬಾರ್ಟ್ಲಿ ಗ್ರಿಫಿತ್ ಹೇಳಿದ್ದಾರೆ. (ಏಜೆನ್ಸೀಸ್)