ನ್ಯೂಸ್

ಆಕೆಯ ಡ್ರೆಸ್​ ಪ್ರಚೋದನಾಕಾರಿಯಾಗಿತ್ತು: ಆರೋಪಿಗೆ ಜಾಮೀನು ನೀಡಿ ಕೋರ್ಟ್​ ಕೊಟ್ಟ ಕಾರಣವಿದು

ಕೊಚ್ಚಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿರುವ ಕೇರಳ ನ್ಯಾಯಲಯ, ಜಾಮೀನು ನೀಡಲು ಕೊಟ್ಟಿರುವ ಕಾರಣ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅರ್ಜಿದಾರಳು ಲೈಂಗಿಕವಾಗಿ ಪ್ರಚೋದನಾಕಾರಿಯಾದ ಉಡುಗೆ ಧರಿಸಿದ್ದರಿಂದ ಲೈಂಗಿಕ ದೌರ್ಜನ್ಯ ಪ್ರಕರಣವು ಪ್ರಾಥಮಿಕವಾಗಿ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ನೀಡಿದೆ.

ವಿವರಣೆಗೆ ಬರುವುದಾದರೆ, ಆಗಸ್ಟ್​ 12ರಂದು ಕೇರಳದ ಕೊಯಿಕ್ಕೋಡ್​ನ ಹೆಚ್ಚುವರಿ ನ್ಯಾಯಾಲಯವು 74 ವರ್ಷದ ಸಾಮಾಜಿಕ ಕಾರ್ಯಕರ್ತ ಹಾಗೂ ಲೇಖಕ ಚಂದ್ರನ್ ಎಂಬುವರ ಜಾಮೀನು ಅರ್ಜಿ ವಿಚಾರಣೆ ನಡೆಸಿತು. ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಚಂದ್ರನ್​ ಅವರ ಮೇಲಿದೆ. ಆರೋಪಿ ಚಂದ್ರನ್​ ಪರ ವಕೀಲರು ಜಾಮೀನು ಅರ್ಜಿಯೊಂದಿಗೆ ದೂರುದಾರ ಮಹಿಳೆಯ ಭಾವಚಿತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಫೋಟೋಗಳಲ್ಲಿ ದೂರುದಾರಳ ಕೆಲವು ಉಡುಪುಗಳು ಲೈಂಗಿಕವಾಗಿ ಪ್ರಚೋದನಕಾರಿಯಾಗಿದ್ದವು ಎಂದು ಅರ್ಜಿದಾರ ಉಲ್ಲೇಖಿಸಿದ್ದರು. ಫೋಟೋಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನ್ಯಾಯಾಲಯ, ಆರೋಪಿ ವಿರುದ್ಧ ಸೆಕ್ಷನ್ 354 ಎ ಪ್ರಾಥಮಿಕವಾಗಿ ನಿಲ್ಲುವುದಿಲ್ಲ ಎಂದು ತೀರ್ಪು ಪ್ರಕಟಿಸಿದೆ. ಅಲ್ಲದೆ, ಆರೋಪಿಗೆ ವಯಸ್ಸಾಗಿದೆ ಹಾಗೂ ದೈಹಿಕವಾಗಿ ಅಂಗವೈಕಲ್ಯವಿದೆ. ಹೀಗಾಗಿ ಆತ ಮಹಿಳೆಯನ್ನು ಬಲವಂತಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಗಮನಿಸಿ, ಜಾಮೀನು ನೀಡಿದೆ. ಈ ತೀರ್ಪು ಇದೀಗ ಸಾರ್ವಜನಿಕ ವಲಯದಲ್ಲೂ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಆಪಾದಿತ ಘಟನೆಯು ಫೆಬ್ರವರಿ 2020 ರಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಯುವ ಬರಹಗಾರ್ತಿಯಾಗಿರುವ ಮಹಿಳೆಯ ಮೇಲೆ ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಂದ್ರನ್​ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದ ಆರೋಪಿಸಿದೆ. ಆದರೆ, ಚಂದ್ರನ್​ ಅವರು ಈ ಹೇಳಿಕೆಯನ್ನು ನಿರಾಕರಿಸಿದ್ದು, ಇದು ತನ್ನ ಶತ್ರುಗಳು ಯೋಜಿಸಿದ ಸುಳ್ಳು ಪ್ರಕರಣ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)