ನ್ಯೂಸ್

ಅವನು ನನ್ನ ಮಗನಲ್ಲ, ಮೋದಿ ಮಗ: ಯೂಕ್ರೇನ್​ನಿಂದ ಬಂದ ಪುತ್ರನನ್ನು ನೋಡಿ ತಂದೆಯ ಭಾವುಕ ಮಾತು

ನವದೆಹಲಿ: ಯುದ್ಧ ಪೀಡಿತ ಯೂಕ್ರೇನ್​ನಿಂದ ಮಗನನ್ನು ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬಂದ ಸರ್ಕಾರಕ್ಕೆ ಕಾಶ್ಮೀರ ಮೂಲದ ಸಂಜಯ್​ ಪಂಡಿತ ಎಂಬುವರು ಧನ್ಯವಾದ ತಿಳಿಸಿದ್ದಾರೆ. ಯೂಕ್ರೇನ್​ನಿಂದ ಮರಳಿದ್ದು ನನ್ನ ಮಗನಲ್ಲ ಪ್ರಧಾನಿ ಮೋದಿ ಅವರ ಮಗನೆಂದು ಹೇಳಲು ಬಯಸುತ್ತೇನೆಂದು ಸಂಜಯ್​ ಇದೇ ಸಂದರ್ಭದಲ್ಲಿ ಭಾವುಕ ಮಾತುಗಳನ್ನಾಡಿದರು.

ಯೂಕ್ರೇನ್​ನ ಸುಮಿಯ ಸ್ಥಿತಿಯನ್ನು ನೋಡಿ ನಾವು ಭರವಸೆ ಕಳೆದುಕೊಂಡಿದ್ದೆವು. ಇಂತಹ ಸಂದಿಗ್ಧ ಸಮಯದಲ್ಲಿ ನನ್ನ ಮಗನನ್ನು ಸುರಕ್ಷಿತವಾಗಿ ತವರಿಗೆ ಕರೆತಂದಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಸಂಜಯ್​ ಪಂಡಿತ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಮಗನನ್ನು ಬರಮಾಡಿಕೊಂಡ ಬಳಿಕ ಮಾಧ್ಯಮಗಳಿಗೆ ಹೇಳಿದರು.

ನಿನ್ನೆ ಬೆಳಗ್ಗೆ ಯೂಕ್ರೇನ್​ನಿಂದ ಬಂದ ತಮ್ಮ ಮಕ್ಕಳನ್ನು ಬರಮಾಡಿಕೊಳ್ಳಲು ಪಾಲಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 5 ರಿಂದ 6 ಗಂಟೆಗಳ ಕಾದು ಕುಳಿತಿದ್ದರು. ಮಕ್ಕಳು ಬರುತ್ತಿದ್ದಂತೆ ಅವರ ಮುಖಗಳನ್ನು ನೋಡಿ ಪಾಲಕರ ಮುಖದಲ್ಲಿ ನಗು ಅರಳಿತು. ಈ ಸಂದರ್ಭದಲ್ಲಿ ಸಂಜಯ್​ ಪಂಡಿತ ಅವರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಈಶಾನ್ಯ ಯೂಕ್ರೇನ್‌ನ ಯುದ್ಧ ಪೀಡಿತ ನಗರವಾದ ಸುಮಿಯಿಂದ ಹೆಚ್ಚಾಗಿ ವಿದ್ಯಾರ್ಥಿಗಳನ್ನೇ ಒಳಗೊಂಡ 674 ಜನರನ್ನು ಹೊತ್ತ ಮೂರು ವಿಮಾನಗಳು ಶುಕ್ರವಾರ ದೆಹಲಿಗೆ ಬಂದಿಳಿಯಿತು. ಬಂದವರು ಯೂಕ್ರೇನ್​ನಲ್ಲಿ ತಾವು ಅನುಭವಿಸಿದ ಭಯಾನಕತೆಯನ್ನು ವಿವರಿಸಿದರು. ಬಂದವರು ಭಾರತ ಹಾಗೂ ಪ್ರಧಾನಿ ಪರ ಘೋಷಣೆಯನ್ನು ಕೂಗಿದರು. (ಏಜೆನ್ಸೀಸ್​)