ಗಡೂರು: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳಿಗೆ ಚಾಕು ಇರಿದ ಯುವಕ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಗಡೂರಿನಲ್ಲಿ ನಡೆದಿದೆ.
ಪೊಲೀಸರು ಮತ್ತು ಸ್ಥಳೀಯರ ಪ್ರಕಾರ ಪಿ. ಸುಧಾಕರ್ ಮತ್ತು ಸರಿತಾ ದಂಪತಿ ಗಡೂರಿನಲ್ಲಿ ಟೀಚರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ತೇಜಸ್ವಿನಿ ಮತ್ತು ಕಾರ್ತಿಕ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ತೇಜಸ್ವಿನಿ ಇಂಜಿನಿಯರ್ ವಿದ್ಯಾರ್ಥಿನಿಯಾಗಿದ್ದಳು.
ಸುಧಾಕರ್ ಸಹೋದ್ಯೋಗಿ ಚೆಂಚುಕೃಷ್ಣಯ್ಯ ಮಗ ವೆಂಕಟೇಶ್ ಮತ್ತು ತೇಜಸ್ವಿನಿ ಕೆಲವು ದಿನಗಳ ಹಿಂದೆ ಪರಿಚಯವಾಗಿತ್ತು. ಬಳಿಕ ತೇಜಸ್ವಿನಿಯನ್ನು ಪ್ರೀತಿಸುವುದಾಗಿ ವೆಂಕಟೇಶ್ ದುಂಬಾಲು ಬಿದ್ದಿದ್ದ. ಆದರೆ, ತೇಜಸ್ವಿನಿಗೆ ಇಷ್ಟವಿರಲಿಲ್ಲ. ಅಲ್ಲದೆ, ಎಚ್ಚರಿಕೆಯನ್ನು ನೀಡಿದ್ದಳು. ಪಾಲಕರಿಂದಲೂ ವಾರ್ನ್ ಮಾಡಿಸಿದ್ದಳು. ವಿವಾದ ದೊಡ್ಡದಾಗುವ ಲಕ್ಷಣಗಳು ಕಾಣುತ್ತಿದ್ದಂತೆ ಚೆಂಚುಕೃಷ್ಣಯ್ಯ ತನ್ನ ಮಗ ವೆಂಕಟೇಶ್ನನ್ನು ಬೆಂಗಳೂರಿಗೆ ಕಳುಹಿಸಿದ್ದ.
ಹೀಗಿರುವಾಗಿ ಕರೊನಾ ಎರಡನೇ ಹಿನ್ನೆಲೆಯಲ್ಲಿ ವೆಂಕಟೇಶ್ ಗಡೂರಿಗೆ ಹಿಂದುರಿಗಿದ್ದ. ಬಳಿಕವೂ ಪ್ರೀತಿ ಮಾಡುವಂತೆ ತೇಜಸ್ವಿನಿಯನ್ನು ಪೀಡಿಸುತ್ತಿದ್ದ. ಆತನ ಕಿರುಕುಳ ಸಹಿಸದೇ ತೇಜಸ್ವಿನಿ ತನ್ನ ಫೋನ್ ನಂಬರ್ ಬದಲಾಯಿಸಿದ್ದಳು. ಆಕೆ ತನ್ನನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ ವೆಂಕಟೇಶ್, ತೇಜಸ್ವಿನಿಯನ್ನು ಶಾಶ್ವತವಾಗಿ ಇಲ್ಲವಾಗಿಸಲು ತೀರ್ಮಾನಿಸಿದ.
ಗುರುವಾರ ಬೆಳಗ್ಗೆ ಸುಧಾಕರ್ ಮತ್ತು ಸರಿತಾ ಶಾಲೆಗೆ ಹೋದಾಗ ಮನೆಯಲ್ಲಿ ತೇಜಸ್ವಿನಿ ಮತ್ತು ಸಹೋದರ ಕಾರ್ತಿಕ್ ಮಾತ್ರ ತಾವು ವಾಸವಿದ್ದ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿದ್ದರು. ಸ್ನೇಹಿತನ ಸಹಾಯದಿಂದ ಬೆಳಗ್ಗೆ 11 ಗಂಟೆಗೆ ತೇಜಸ್ವಿನಿ ಮನೆಗೆ ಬಂದ ವೆಂಕಟೇಶ್, ತಾನು ಕೆಳಗಡೆ ನಿಂತು, ಸ್ನೇಹಿತನನ್ನು ಮಹಡಿಗೆ ಕಳುಹಿಸಿ ಯಾರಿದ್ದಾರೆಂದು ನೋಡಿ ಬರಲು ಹೇಳಿದ್ದ. ತೇಜಸ್ವಿನಿ ತಮ್ಮ ಕಾರ್ತಿಕ್ ಮಹಡಿಯಿಂದ ಕೆಳಗೆ ಬರುವುದನ್ನು ನೋಡಿದ ವೆಂಕಟೇಶ್, ತನ್ನ ಸ್ನೇಹಿತನಿಗೆ ಹೊರಡುವಂತೆ ಹೇಳಿ ತೇಜಸ್ವಿನಿ ಇದ್ದ ಫ್ಲ್ಯಾಟ್ ಒಳಗೆ ನುಸುಳಿದ.
ತೇಜಸ್ವಿನಿ ಲಿವಿಂಗ್ ರೂಮ್ನಲ್ಲಿರುವುದನ್ನು ನೋಡಿದ ವೆಂಕಟೇಶ್ ಆಕೆಯ ಮೇಲೆ ಚಾಕುವಿನಿಂದ ದಾಳಿ ಮಾಡಿ, ಗಂಟಲು ಸೀಳಿ ಬಳಿಕ ಆಕೆಯ ವೇಲ್ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡುತ್ತಾನೆ. ಬಳಿಕ ಮನೆಯಲ್ಲಿ ನಡೆದಿರುವ ಘಟನೆ ಸುಧಾಕರ್ಗೆ ಮಗ ಕಾರ್ತಿಕ್ನಿಂದ ತಿಳಿಯುತ್ತದೆ. ಬಳಿಕ ಸುಧಾಕರ್ ಎಮರ್ಜೆನ್ಸಿ ನಂಬರ್ 100ಗೆ ಕರೆ ಮಾಡುತ್ತಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಾರೆ.
ಮುಚ್ಚಿದ್ದ ಬಾಗಿಲನ್ನು ಮುರಿದು ಒಳಗಡೆ ಪ್ರವೇಶಿಸಿದಾಗ ತೇಜಸ್ವಿನಿ ರಕ್ತದ ಮಡುವಿನಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿರುತ್ತಾನೆ. ಇನ್ನೊಂದೆಡೆ ಅದೇ ಮನೆಯಲ್ಲಿ ವೆಂಕಟೇಶ್ ಕಿಟಕಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಇಬ್ಬರ ಪ್ರಾಣ ಅಷ್ಟರಲ್ಲಾಗಲೇ ಹೋಗಿರುವುದಾಗಿ ವೈದ್ಯರು ದೃಢಪಡಿಸುತ್ತಾರೆ.
ಘಟನೆ ಸಂಬಂಧ ತೇಜಸ್ವಿನಿ ತಂದೆ ಸುಧಾಕರ್ ನೀಡಿದ ದೂರಿನ ಆಧಾರದ ವೆಂಕಟೇಶ್ ಮತ್ತು ಆತನ ತಂದೆ ಚೆಂಚುಕೃಷ್ಣಯ್ಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್)