ನ್ಯೂಸ್

2 ಸಾವಿರ ರೂ. ನೋಟು ಕೊಟ್ಟ ಗ್ರಾಹಕ: ಚಿಲ್ಲರೆ ತರಲು ಹೋದ ಅಂಗಡಿ ಮಾಲೀಕನಿಗೆ ಕಾದಿತ್ತು ಬಿಗ್​ ಶಾಕ್​!

ಭುವನೇಶ್ವರ: ಕಿರಾಣಿ ಅಂಗಡಿಯಲ್ಲಿ ಏನಾದರೂ ಖರೀದಿಸಿ ಎರಡು ಸಾವಿರ ರೂಪಾಯಿ ಕೊಟ್ಟು ಚಿಲ್ಲರೆ ಕೇಳಿದಾಗ ಚಿಲ್ಲರೆ ತರಲು ಹೊರಗಡೆ ಹೋಗುವ ಮುನ್ನ ನಿಮ್ಮ ಅಂಗಡಿಯ ಗಲ್ಲಾಪೆಟ್ಟಿಗಯನ್ನು ಭದ್ರ ಮಾಡಿ ಹೋಗಿ, ಇಲ್ಲದಿದ್ದಲ್ಲಿ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಈ ಘಟನೆ ನಡೆದಿದೆ. ಕಿರಾಣಿ ಅಂಗಡಿಗೆ ಬಂದ ದುಷ್ಕರ್ಮಿಯೊಬ್ಬ ವಸ್ತುವೊಂದನ್ನು ಖರೀದಿಸಿ 2 ಸಾವಿರ ರೂಪಾಯಿ ನೋಟು ನೀಡಿ ಚಿಲ್ಲರೆ ಕೇಳಿದ್ದಾನೆ. ಆದರೆ, ಅಂಗಡಿಯವನ ಬಳಿ ಚಿಲ್ಲರೆ ಇರಲಿಲ್ಲ.

ಸ್ವಲ್ಪ ಸಮಯ ಇಲ್ಲೇ ನಿಂತಿರಿ ಚಿಲ್ಲರೆ ಪಡೆದು ಬರುತ್ತೇನೆಂದು ಹೇಳಿ ಅಂಗಡಿ ಮಾಲೀಕ ಹೊರ ಹೋಗಿದ್ದಾರೆ. ಚಿಲ್ಲರೆ ಪಡೆದು ಬಂದು ನೋಡಿದರೆ, ಅಂಗಡಿಯ ಮುಂದೆ ಚಿಲ್ಲರೆ ಕೇಳಿದ ವ್ಯಕ್ತಿ ಇರಲಿಲ್ಲ. ಏನಾಗಿರಬಹುದು ಎಂದು ಅಂಗಡಿ ಒಳಗೆ ಬಂದು ನೋಡಿದಾಗ ಮಾಲೀಕನಿಗೆ ಬಹುದೊಡ್ಡವೇ ಆಘಾತವೇ ಕಾದಿತ್ತು.

ಮಾಲೀಕ ಚಿಲ್ಲರೆ ಪಡೆದು ಬರುವಷ್ಟರಲ್ಲಿ ದುಷ್ಕರ್ಮಿ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನೆಲ್ಲ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಭುವನೇಶ್ವರದ ಸತ್ಯನಗರ ಏರಿಯಾದಲ್ಲಿ ಎರಡನೇ ಬಾರಿಗೆ ನಡೆದಿದೆ.

ಘಟನೆ ಸಂಬಂಧ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)