ನ್ಯೂಸ್

ಬಣ್ಣದ​ ಲೋಕಕ್ಕೆ ಗುಡ್​ಬೈ ಹೇಳಿ ಗ್ರಾ.ಪಂ ಚುನಾವಣಾ ಕಣಕ್ಕಿಳಿದ ಮಾಡೆಲ್​: ಗ್ಲಾಮರ್​ ಗೊಂಬೆ ಕೊಟ್ಟ ಕಾರಣ ಹೀಗಿದೆ...

ಬಲಂಗೀರ್​: ಒಡಿಶಾದ ಗ್ಲಾಮರ್​ ಬೊಂಬೆ ಪ್ರಿಯಾಂಕಾ ನಂದ ಅವರು ಬಣ್ಣದ ಲೋಕದ ಆಸೆಯನ್ನು ಬಿಟ್ಟು ಗ್ರಾಮ ಪಂಚಾಯಿತಿ ಚುನಾವಣೆಗೆ ಧುಮುಕುವ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಬ್ಯೂಟಿ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳ ಜತೆಯಲ್ಲಿ ಟೈಟಲ್​ಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಪ್ರಿಯಾಂಕಾ, ಒಡಿಶಾ ರಾಜಕೀಯದಲ್ಲಿ ಸಕ್ರೀಯರಾಗುವತ್ತ ಗಮನ ಹರಿಸಿದ್ದಾರೆ. ಸದ್ಯ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದು ಬಲಂಗೀರ್​ ಜಿಲ್ಲೆಯ ಗ್ರಾಮವೊಂದರ ಕಚ್ಛಾ ರಸ್ತೆಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಅಂದಹಾಗೆ ಪ್ರಿಯಾಂಕಾ, ಜಿಲ್ಲೆಯ ಧುಲುಸರ್​ ಗ್ರಾಮದ ನಿವಾಸಿ. ಈಕೆ ಚುಡಪಲಿ ಬ್ಲಾಕ್​ನಿಂದ ಸ್ಪರ್ಧಿಸುತ್ತಿದ್ದಾರೆ. ಭೋಪಾಲ್​ನಲ್ಲಿ ವಿದ್ಯಾಭ್ಯಾಸ ಮುಗಿಸಿದ ಪ್ರಿಯಾಂಕಾ ನಂತರದಲ್ಲಿ ಮಾಡೆಲಿಂಗ್​ ಕ್ಷೇತ್ರಕ್ಕೆ ಧುಮುಕಿದರು. 2015ರಿಂದಲೂ ಮಾಡೆಲ್​ ಆಗಿ ಕೆಲಸ ಮಾಡಿದ್ದಾರೆ.

ಲಾಕ್​ಡೌನ್​ ಸಂದರ್ಭದಲ್ಲಿ ಊರಿಗೆ ಬಂದ ಪ್ರಿಯಾಂಕಾ, ಜನರ ಸಮಸ್ಯೆಗಳನ್ನು ನೋಡಿದ್ದಾರೆ. ಅಲ್ಲದೆ, ಹುಟ್ಟಿನಿಂದಲೂ ಒಂದು ಚೂರು ಬದಲಾಗದ ಗ್ರಾಮವನ್ನು ನೋಡಿ ಏನಾದರೂ ಮಾಡಬೇಕೆಂದರೆ ಅದಕ್ಕೆ ರಾಜಕೀಯವೇ ಸೂಕ್ತ ಎಂದು ಚುನಾವಣೆಗೆ ಸ್ಫರ್ಧಿಸುವ ನಿರ್ಧಾರ ಮಾಡಿರುವುದಾಗಿ ಸ್ವತಃ ಪ್ರಿಯಾಂಕಾ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಪ್ರಿಯಾಂಕಾ ಅವರು ಮೊದಲ ಇಂಡಿಯಾ ರನ್ವೇ ದಿವಾ ಬ್ಯೂಟಿ ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು ಐದನೇ ಸ್ಥಾನ ಪಡೆದರು. 2020 ರಲ್ಲಿ ಇಂಡಿಯನ್ ಸ್ಟೈಲ್ ಐಕಾನ್ ಸೌಂದರ್ಯ ಸ್ಪರ್ಧೆಯನ್ನು ಗೆದ್ದರು. ಇದಾದ ಬಳಿಕ ಬಾಲಿವುಡ್‌ನಲ್ಲಿ ಸ್ಥಾನ ಗಿಟ್ಟಿಸುವ ಪ್ರಯತ್ನದಲ್ಲಿದ್ದರು. ಆದರೆ, ಈಗ ರಾಜಕೀಯಕ್ಕೆ ಬಂದಿದ್ದು, ಬಣ್ಣದ ಲೋಕಕ್ಕೆ ಗುಡ್​ಬೈ ಹೇಳಿದ್ದಾರೆ. (ಏಜೆನ್ಸೀಸ್​)