ಲಂಡನ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿರುವ ಅವಿಶ್ವಾಸ ನಿರ್ಣಯದ ಪರ-ವಿರೋಧ ಮತ ಇಂದು ಚಲಾವಣೆ ಆಗಲಿದ್ದು, ಇಮ್ರಾನ್ ಖಾನ್ ಅವರ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಇದರ ಬೆನ್ನಲ್ಲೇ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಲಂಡನ್ನಲ್ಲಿ ಶನಿವಾರ ದಾಳಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಆಡಳಿತಾರೂಢ ಪಾಕಿಸ್ತಾನ ತೆಹ್ರಿಕ್ ಇ ಇನ್ಸಫ್ (ಪಿಟಿಐ) ಪಕ್ಷದ ಕಾರ್ಯಕರ್ತ ನಾವಾಜ್ ಷರೀಫ್ ಮೇಲೆ ದಾಳಿ ಮಾಡಿದ್ದು ಈ ಘಟನೆಯಲ್ಲಿ ಷರೀಫ್ ಅವರ ರಕ್ಷಣಾ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ಪಾಕಿಸ್ತಾನದ ಪತ್ರಕರ್ತ ಅಹ್ಮದ್ ನೂರನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇಮ್ರಾನ್ ಖಾನ್ ವಿಶ್ವಾಸ ಮತ ಸಾಬೀತಿಗೂ ಒಂದು ದಿನದ ಮುಂಚೆಯೇ ಈ ಘಟನೆ ಲಂಡನ್ನಲ್ಲಿ ನಡೆದಿದೆ. ಒಂದು ವೇಳೆ ಅವಿಶ್ವಾಸ ನಿರ್ಣಯವು ಯಶಸ್ವಿಯಾದರೆ, ನವಾಜ್ ಷರೀಫ್ ಅವರ ಸಹೋದರ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ನ ಶೆಹಬಾಜ್ ಷರೀಫ್ ಅವರು ಪ್ರಧಾನಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಲಿದ್ದಾರೆ.
ಷರೀಫ್ ಮೇಲಿನ ಹಲ್ಲೆಯ ಬಗ್ಗೆ ಮಾತನಾಡಿರುವ ಅವರ ಪುತ್ರಿ, ಮರ್ಯಮ್, ಹಿಂಸಾಚಾರ ನಡೆಸುತ್ತಿರುವ ಆಡಳಿತ ಪಕ್ಷದವರನ್ನು ಜೈಲಿಗೆ ಹಾಕಬೇಕು. ಪ್ರಚೋದನೆ ಮತ್ತು ದೇಶದ್ರೋಹಕ್ಕಾಗಿ ಇಮ್ರಾನ್ ಖಾನ್ ಅವರ ಮೇಲೆಯೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಮ್ರಾನ್ ಖಾನ್ ಸರ್ಕಾರ ಮುಂದುವರಿಯಬೇಕೇ? ಅಥವಾ ಬೇಡವೇ? ಎಂಬುದು ಇಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಧಾರವಾಗಲಿದೆ. ಪಾಕಿಸ್ತಾನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಲು ಪ್ರತಿಪಕ್ಷಕ್ಕೆ 172 ಮತಗಳ ಅಗತ್ಯವಿದೆ. ಹಾಗೇ ಪ್ರತಿಪಕ್ಷದ ಪ್ಲಾನ್ ಅನ್ನು ತಲೆಕೆಳಗಾಗಿಸಲು ಇಮ್ರಾನ್ಗೂ 172 ಮತಗಳ ಅವಶ್ಯಕತೆ ಇದೆ. (ಏಜೆನ್ಸೀಸ್)