ಹೈದರಾಬಾದ್: ಮಹಾಮಾರಿ ಕೋವಿಡ್ನಿಂದಾಗಿ ಶಾಲೆಯಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳು ಇದೀಗ ಮತ್ತೆ ಶಾಲೆಯ ಮೆಟ್ಟಿಲೇರುತ್ತಿರುವುದು ಒಂದು ರೀತಿಯ ವಿಶಿಷ್ಟ ಅನುಭವ. ಹೀಗಾಗಿ ಈ ಕ್ಷಣವನ್ನು ಕೆಲವೆಡೆ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆಯೆಂದರೆ, ಇತ್ತೀಚೆಗೆ ಹೈದರಾಬಾದ್ನ ಮಾಜಿ ಶಾಸಕ ವಿಷ್ಣುವರ್ಧನ್ ರೆಡ್ಡಿಯವರು ತಮ್ಮ ಮಗಳನ್ನು ಮೆರವಣಿಗೆ ಮೂಲಕ ಶಾಲೆಗೆ ಬಿಟ್ಟು ಬಂದಿದ್ದಾರೆ.
ಎರಡು ವರ್ಷಗಳ ಸುದೀರ್ಘ ಅಂತರದ ಬಳಿಕ ಮಗಳು ಜನಶ್ರೀ ರೆಡ್ಡಿ ಮತ್ತೆ ಶಾಲೆಗೆ ಹೋಗಲು ಆರಂಭಿಸಿದ್ದಾಳೆ. ಇದರಿಂದ ತಂದೆಯ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿದೆ. ಹೀಗಾಗಿ ಮಗಳಿಗೆ ಸರ್ಪ್ರೈಸ್ ಕೊಡಲು ಮಾಜಿ ಶಾಸಕ ವಿಷ್ಣುವರ್ಧನ್ ರೆಡ್ಡಿ ಪ್ಲಾನ್ ಮಾಡಿ ಮೆರವಣಿಗೆಯನ್ನು ಆಯೋಜನೆ ಮಾಡಿದ್ದರು.
ತಂದೆಯ ಈ ಸರ್ಪ್ರೈಸ್ನಿಂದ ಗಲಿಬಿಲಿಗೊಂಡ 13 ವರ್ಷದ ಮಗಳು ಆರಂಭದಲ್ಲಿ ಶಾಲೆಗೆ ಹೋಗಲು ನಿರಾಕರಿಸಿದಳು. ಆದರೆ, ನಂತರದಲ್ಲಿ ತಂದೆಯ ಮಾತಿಗೆ ಗೌರವ ಕೊಟ್ಟು ಮೆರವಣಿಗೆಯನ್ನು ಎಂಜಾಯ್ ಮಾಡಿಕೊಂಡು ಶಾಲೆಗೆ ಹೋಗಿದ್ದಾಳೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಎರಡು ವರ್ಷಗಳ ನಂತರ ತಮ್ಮ ಮಗಳು ದೈಹಿಕ ತರಗತಿಗಳಿಗೆ ಹಾಜರಾಗುತ್ತಿರುವುದು ತನಗೆ ಅತ್ಯಂತ ವಿಶೇಷ ಕ್ಷಣವಾಗಿದೆ ಎಂದು ಹೇಳಿದರು. (ಏಜೆನ್ಸೀಸ್)