ನ್ಯೂಸ್

ಮರ ಉಸಿರಾಡೋದನ್ನ ಎಲ್ಲಾದರೂ ನೋಡಿದ್ದೀರಾ?! ಇಲ್ಲಿದೆ ನೋಡಿ ಅಪರೂಪದ ವಿಡಿಯೋ...

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಕೆಲವೊಂದು ವಿಡಿಯೋಗಳು ತುಂಬಾ ಫನ್ನಿಯಾಗಿರುತ್ತವೆ ಮತ್ತು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ ಮತ್ತು ಹುಬ್ಬೇರಿಸುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ಸದ್ಯ ವೈರಲ್​ ಆಗಿರುವ ವಿಡಿಯೋ ನೋಡಿದರೆ ಒಂದು ಕ್ಷಣ ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ. ಹೌದು, ಪ್ರಾಣಿ-ಪಕ್ಷಿಗಳು ಉಸಿರಾಡುವುದನ್ನು ನೋಡಿದ್ದೇವೆ. ಆದರೆ, ಮರ ಉಸಿರಾಡುವುದನ್ನು ಎಂದಾದರೂ ನೋಡಿದ್ದೀರಾ? ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮರ ಉಸಿರಾಡುವುದನ್ನು ನೋಡಬಹುದಾಗಿದೆ. ಉಸಿರಾಡುವಾಗ ಜೀವಿಗಳ ಎದೆಯ ಏರಿಳಿತ ಯಾವ ರೀತಿ ಇರುತ್ತದೋ ಅದೇ ಮಾದರಿಯಲ್ಲಿ ಮರದ ಉಸಿರಾಟವು ಇದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮರದ ಮಧ್ಯ ಭಾಗದಲ್ಲಿ ಬಿರುಕು ಮೂಡಿದೆ. ಮನುಷ್ಯರು ಉಸಿರಾಡುವಂತೆಯೇ ಮರವು ಬಿರುಕನ್ನು ಮುಚ್ಚುವ ಮತ್ತು ತೆರೆಯುವ ಮೂಲಕ ಉಸಿರಾಡುವುದನ್ನು ಮತ್ತು ಉಸಿರು ಬಿಡುವುದನ್ನು ವೀಡಿಯೊ ತೋರಿಸುತ್ತದೆ. ಈ ಅಪರೂಪದ ವಿದ್ಯಾಮಾನ ಕೆನಡಾದ ಕಾಲ್ಗರಿಯಲ್ಲಿ ನಡೆದಿದೆ.

ಅಂದಹಾಗೆ ಭಾರಿ ಮಳೆ ಮತ್ತು ಗಾಳಿಯ ನಂತರ ಮರದಲ್ಲಿ ಬಿರುಕು ಉಂಟಾಗುತ್ತದೆ ಮತ್ತು ಗಾಳಿ ಬೀಸುವ ಸಮಯದಲ್ಲಿ ಈ ಬಿರುಕು ತೆರೆದು ಮುಚ್ಚುತ್ತದೆ. ಹೀಗಾಗಿ ಮರವು ಉಸಿರಾಡುತ್ತಿರುವಂತೆ ಭಾಸವಾಗುತ್ತದೆ. ಈ ವಿಡಿಯೋವನ್ನು ವೈರಲ್​ ಹಗ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ಈ ಹಿಂದೆಯೂ ಬ್ರೀಥಿಂಗ್ ಟ್ರೀ ಎಂಬ ವಿಡಿಯೋಗಳು ಬಂದಿವೆ. ಇಂತಹ ವಿದ್ಯಮಾನಗಳ ಹಿಂದೆ ಭೂವೈಜ್ಞಾನಿಕ ಬದಲಾವಣೆಗಳಿವೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ವೈರಲ್​ ಹಗ್​)