ವಿಶಾಖಪಟ್ಟಣ: ಚಲಿಸುತ್ತಿರುವಾಗ ಎಕ್ಸ್‌ಪ್ರೆಸ್ ರೈಲಿನ ಇಂಜಿನ್, ತನ್ನ ಬೋಗಿಯಿಂದ ಬೇರ್ಪಟ್ಟು, ಸುಮಾರು ಒಂದು ಕಿ.ಮೀ ಹೆಚ್ಚು ದೂರ ಹಾಗೇ ಕ್ರಮಿಸಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.
ವಿಶಾಖಪಟ್ಟಣಂ-ನಿಜಾಮುದ್ದೀನ್ ಸಮತಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12807) ಬುಧವಾರ ಬೆಳಗ್ಗೆ ಆಂಧ್ರಪ್ರದೇಶದ ಪಾರ್ವತಿಪುರಂ ಜಿಲ್ಲೆಯ ಸೀತಾನಗರಂ ಮಂಡಲದ ಗುಚಿಮಿ ಗ್ರಾಮದ ಮೂಲಕ ಚಲಿಸುತ್ತಿದ್ದಾಗ ಈ ಆತಂಕಕಾರಿ ಘಟನೆ ನಡೆದಿದೆ.
ಪ್ಯಾಸೆಂಜರ್ ರೈಲು ಸುಮಾರು ಒಂದು ಕಿ.ಮೀ ಅಧಿಕ ದೂರ ಇಂಜಿನ್ ಇಲ್ಲದೇ ಸಾಗಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ಮನೆ ಮಾಡಿತ್ತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಇಂಜಿನ್ನಿಂದ ಬೇರ್ಪಟ್ಟ ಬೋಗಿಗಳನ್ನು ನಿಲ್ಲಿಸಿದ ನಂತರ ಮತ್ತೆ ಅದೇ ಇಂಜಿನ್ ಜೋಡಿದಿ ರೈಲು ಪ್ರಯಾಣವನ್ನು ಪುನರಾರಂಭಿಸಿದರು.
ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)