ಶಿಮ್ಲಾ: ವಾಹನಗಳಿರುವುದು ಸುರಕ್ಷಿತ ಪ್ರಯಾಣಕ್ಕೆ ಎಂಬುದನ್ನೇ ಕೆಲವರು ಮರೆತು ಬಿಟ್ಟಿದ್ದಾರೆ. ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿಕೊಂಡು, ತಾವೂ ಅಪಾಯಕ್ಕೆ ಸಿಲುಕುವುದಲ್ಲದೆ, ಇತರೆ ಪ್ರಯಾಣಿಕರಿಗೆ ತೊಂದರೆ ಕೊಡುತ್ತಾರೆ. ಇಂಥದ್ದೆ ಘಟನೆ ಇದೀಗ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ನಡೆದಿದೆ.
ರಸ್ತೆಯಲ್ಲಿ ಕಾರಿನಲ್ಲಿ ಸಾಹಸ ಮಾಡುವಾಗ ನಿಯಂತ್ರಣದ ಕಳೆದುಕೊಂಡ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಕಾರು ಹಾರಿದ ಘಟನೆ ಜುಲೈ 26ರ ಮಂಗಳವಾರ ಸೋಲನ್ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರು ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಕಾರು ಮಾತ್ರ ಜಖಂಗೊಂಡಿದೆ.
ಈ ಘಟನೆ ಸೋಲನ್ನ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಟೀಕೆಗೆ ಗುರಿಯಾಗಿದೆ.
ಕಾರು ಚಾಲಕನನ್ನು ಅಮೃತಸರ ನಿವಾಸಿ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಕಾರು ಚಾಲಕ ಡ್ರೈವಿಂಗ್ ಮಾಡುತ್ತಾ ಸಾಹಸ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಡಿವೈಡರ್ಗೆ ಡಿಕ್ಕಿ ಹೊಡೆಯುವ ಕಾರು, ಪಕ್ಕದ ರಸ್ತೆಗೆ ಹಾರುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಲನ್ ಪೊಲೀಸರು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್)