ವಾಷಿಂಗ್ಟನ್: ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ಮುಂದುವರಿದಿರುವ ನಡುವೆಯೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಭವಿಷ್ಯವೊಂದನ್ನು ಹೇಳಿದ್ದಾರೆ.
ಇದೀಗ ರಷ್ಯಾ, ಯೂಕ್ರೇನ್ ಮೇಲೆ ಆಕ್ರಮಣ ಮಾಡಿದೆ. ಇದರ ಪ್ರಭಾವದಿಂದ ಮುಂದಿನ ಭಾರೀ ತೈವಾನ್ ಆಕ್ರಮಣಕ್ಕೆ ಒಳಗಾಗುವ ಸಾಧ್ಯೆತೆ ಇದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತುಂಬಾ ಹತ್ತಿರದಿಂದ ತೈವಾನ್ ಅನ್ನು ವೀಕ್ಷಿಸುತ್ತಿದ್ದಾರೆ. ನೋಡ್ತಾ ಇರಿ ಮುಂದಿನ ಸರದಿ ತೈವಾನ್ ಆಗಿರಲಿದೆ ಎಂದು ಫಾಕ್ಸ್ ಬಿಸಿನೆಸ್ ಮಾಧ್ಯಮದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಯುಎಸ್ ಹಾಲಿ ಅಧ್ಯಕ್ಷ ಹಾಗೂ ತಮ್ಮ ಎದುರಾಳಿ ಜೋ ಬೈಡೆನ್ ವಿರುದ್ಧ ಟ್ರಂಪ್ ಹರಿಹಾಯ್ದರು. ತೈವಾನ್‌ನ ಸಂಭಾವ್ಯ ಆಕ್ರಮಣವನ್ನು ನಾನು ನಿರೀಕ್ಷಿಸಿಸುತ್ತಿದ್ದೇನೆ. ಏಕೆಂದರೆ, ಯುನೈಟೆಡ್ ಸ್ಟೇಟ್ಸ್ ಅನ್ನು ಮೂರ್ಖತನದಿಂದ ನಡೆಸಲಾಗುತ್ತಿದೆ ಎಂದು ಬೈಡೆನ್ ಆಡಳಿತವನ್ನು ಟ್ರಂಪ್ ಟೀಕಿಸಿದ್ದಾರೆ.
ನಮ್ಮ ನಾಯಕರು ಅಸಮರ್ಥರು ಎಂಬುದನ್ನು ಚೀನಾ ಮತ್ತು ರಷ್ಯಾ ನೋಡುತ್ತಿದೆ. ಇದರಿಂದಾಗಿಯೇ ಅವರು ಆಕ್ರಮಣಕ್ಕೆ ಮುಂದಾಗಿದ್ದಾರೆ. ಇದೀಗ ಅವರ ಸಮಯವಾಗಿದೆ ಎಂದರು. ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧವನ್ನು ತುಂಬಾ ಸೂಕ್ಷ್ಮವಾಗಿ ಚೀನಾ ವೀಕ್ಷಿಸುತ್ತಿದೆ. ಅಲ್ಲದೆ, ಕಳೆದ ವರ್ಷ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಸ್ಥಳಾಂತರಿಸುವಿಕೆಯನ್ನು ಯುನೈಟೆಡ್ ಸ್ಟೇಟ್ಸ್ ನಿರ್ವಹಿಸಿದ ರೀತಿಯಿಂದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಂದು ಹಂತದ ಸುಳಿವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.
ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಉನ್ನತ ಮಟ್ಟದ ಬುದ್ಧಿವಂತಿಕೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅಫ್ಘಾನಿಸ್ತಾನ ಏನು ನಡೆಯಿತು ಅದನ್ನು ನೋಡಿದ್ದಾರೆ. ಅಮೆರಿಕವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅಮೆರಿಕನ್ ನಾಗರಿಕರನ್ನು ಅಫ್ಘಾನ್ನಲ್ಲಿಯೇ ಬಿಟ್ಟಿದ್ದು, ಇನ್ನೂ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಕ್ಸಿ ಜಿನ್‌ಪಿಂಗ್ ಅದನ್ನು ಹತ್ತಿರದಿಂದ ನೋಡಿದ್ದಾರೆ ಮತ್ತು ಅವರು ಏನು ಮಾಡಲು ಬಯಸಿದ್ದಾರೋ ಅದನ್ನು ಮಾಡಲು ಇದೀಗ ಅವಕಾಶ ಬಂದಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
ಫೆಬ್ರವರಿ 24 ರಂದು ರಷ್ಯಾ, ಯೂಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿತು. ಶೀಘ್ರದಲ್ಲೇ, ರಷ್ಯಾದ ಉಕ್ರೇನ್ ಆಕ್ರಮಣವು ತೈವಾನ್ ಅನ್ನು ಆಕ್ರಮಿಸುವ ಚೀನಾದ ಯೋಜನೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಟ್ರಂಪ್ ಈ ರೀತಿಯಾಗಿ ಉತ್ತರಿಸಿದರು.
ಇದೇ ಸಂದರ್ಭದಲ್ಲಿ ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರು ಯೂಕ್ರೇನ್ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದರು, ಆಕ್ರಮಣವು ಉಕ್ರೇನಿಯನ್ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ನಾಶಪಡಿಸಿದೆ ಎಂದು ಹೇಳಿದರು. (ಏಜೆನ್ಸೀಸ್)