ನ್ಯೂಸ್

ಕರೊನಾ​ ರೋಗಿಗಳ ಪಾಲಿನ ದೇವರಾಗಿದ್ದ ಯುವ ವೈದ್ಯ ಆತ್ಮಹತ್ಯೆ: ಸಾವಿಗೆ ಕಾರಣ ಕೇಳಿದ್ರೆ ಕಣ್ತುಂಬಿ ಬರುತ್ತದೆ!

ನವದೆಹಲಿ: ಭಾರತದಲ್ಲಿ ಕರೊನಾ ಎರಡನೇ ಅಲೆ ತೀವ್ರವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಒತ್ತಡವನ್ನು ತಾಳಲಾರದೇ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿರುವುದಾಗಿ ವೈದ್ಯಕೀಯ ಮಂಡಳಿಯ ಮಾಜಿ ಮುಖ್ಯಸ್ಥ ಟ್ವೀಟ್​ ಮಾಡಿದ್ದಾರೆ.‘

ಡಾ. ವಿವೇಕ್​ ರೈ ಆತ್ಮಹತ್ಯೆಗೆ ಶರಣಾದ ವೈದ್ಯ. ಈ ಬಗ್ಗೆ ಟ್ವೀಟ್​ ಮಾಡಿರುವ ಭಾರತೀಯ ವೈದ್ಯಕೀ ಸಂಘಟನೆ (ಐಎಂಎ) ಯ ಮಾಜಿ ಮುಖ್ಯಸ್ಥ ಡಾ. ರವಿ ವಾಂಖೇಡ್ಕರ್​, ವಿವೇಕ್​ ಓರ್ವ ಪರಿಣಿತ ವೈದ್ಯನಾಗಿದ್ದ. ಅವರು ಉತ್ತರ ಪ್ರದೇಶದ ಗೋರಖ್​ಪುರ್​ ಮೂಲದವರು. ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ಮಂದಿಯ ಪ್ರಾಣ ಉಳಿಸಿದ್ದಾರೆಂದು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳನ್ನು ನೋಡಿಕೊಳ್ಳುತ್ತಿದ್ದರು. ಪ್ರತಿದಿನ 7 ರಿಂದ 8 ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಹೆಚ್ಚು ಹೆಚ್ಚು ಜನ ಕರೊನಾ ಬಲಿಯಾಗುವುದುನ್ನು ನೋಡಿ ವಿವೇಕ್​ ಖಿನ್ನತೆಗೆ ಜಾರಿದ್ದರು. ಪರಿಸ್ಥಿತಿಯ ಮೇಲೆ ತೀವ್ರ ಹತಾಶೆಗೊಂಡ ವಿವೇಕ್​ ತೀವ್ರ ಒತ್ತಡಕ್ಕೆ ಒಳಗಾಗಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಣ್ಣ ಎದುರಲ್ಲೇ ಜನರ ಪ್ರಾಣ ಹೋಗುವುದನ್ನು ಸಹಿಸದೇ ತಾವೂ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ವಿವೇಕ್​ ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ಅಗಲಿದ್ದಾರೆಂದು ವಾಂಖೇಡ್ಕರ್​ ಹೇಳಿದರು.

ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸುವಾಗ ಇದು ಭಾರಿ ಭಾವನಾತ್ಮಕ ಒತ್ತಡವನ್ನು ಗಮನಕ್ಕೆ ತರುತ್ತದೆ. ಯುವ ವೈದ್ಯನ ಈ ಸಾವು ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆಯ ನಿರಾಶೆಯನ್ನು ಸೃಷ್ಟಿಸಿರುವ ಈ ಕೆಟ್ಟ ವ್ಯವಸ್ಥೆ ಮಾಡಿದ ಕೊಲೆ ಎಂದರೆ ತಪ್ಪಾಗಲಾರದು. ಕೆಟ್ಟ ರಾಜಕೀಯ ಮತ್ತು ಕೆಟ್ಟ ಆಡಳಿತ ದುಷ್ಪರಿಣಾಮವಿದೆ ಎಂದು ವಾಖೇಂಡ್ಕರ್​ ಜರಿದಿದ್ದಾರೆ.

ವಿವೇಕ್​ ಅವರ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕರೊನಾ ಎರಡನೇ ಅಲೆ ಇಡೀ ದೇಶದ ಆರೋಗ್ಯ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆಕ್ಸಿಜನ್​ಗಾಗಿ ಕುಟುಂಬಸ್ಥರು ಬೀದಿ ಬೀದಿಯಲ್ಲಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವು-ನೋವುಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ವೈದ್ಯರೊಬ್ಬರನ್ನು ಕಳೆದುಕೊಳ್ಳುತ್ತೇವೆಂದರೆ, ಅದು ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತೆ. (ಏಜೆನ್ಸೀಸ್​)