ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದು, 46 ವರ್ಷಗಳ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಮಳೆಯನ್ನು ದೆಹಲಿ ದಾಖಲಿಸಿದೆ. ಶನಿವಾರ (ಸೆ.11) ಬೆಳಗ್ಗೆಯೂ ವರುಣರಾಯ ಆರ್ಭಟಿಸಿದ್ದು, ಈ ಬಾರಿಯ ಮುಂಗಾರು ಅವಧಿಯಲ್ಲಿ 1100 ಮಿಲಿ ಮೀಟರ್ ಮಳೆಯೊಂದಿಗೆ ದೆಹಲಿ ದಾಖಲೆ ಬರೆದಿದೆ.
2003ರಲ್ಲಿ 1050 ಮಿ.ಮಿ ಮಳೆಯಾಗಿತ್ತು. ಇದೀಗ ಆ ದಾಖಲೆಯನ್ನು ದೆಹಲಿ ಮುರಿದಿದೆ. 1975ರ ಬಳಿಕ ಗರಿಷ್ಠ ಪ್ರಮಾಣದ ಮಳೆಗೆ 2021ರ ಮುಂಗಾರು ಅವಧಿ ಸಾಕ್ಷಿಯಾಗಿದೆ. 1975ರಲ್ಲಿ 1150 ಮಿ.ಮೀ ಮಳೆಯಾಗಿತ್ತು. ಇದೀಗ 46 ವರ್ಷಗಳ ಬಳಿಕ ಮತ್ತೆ ಗರಿಷ್ಠ ಮಳೆಯಾಗಿದೆ.
ದೆಹಲಿಯ ಸಫ್ದರ್ಜಂಗ್ ವೀಕ್ಷಣಾಲಯ ಪ್ರಕಾರ ಶುಕ್ರವಾರ ಬೆಳಗ್ಗೆ 8.30 ರಿಂದ ಶನಿವಾರ ಬೆಳಗ್ಗೆ 8.30ರವರೆಗೆ ದೆಹಲಿಯಲ್ಲಿ 94.7 ಮಿ.ಮೀ ಮಳೆಯಾಗಿದೆ. ನಿನ್ನೆಯಿಂದಲೇ ರಾಜಧಾನಿಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ.
ಶನಿವಾರ ಆರೆಂಜ್ ಅಲರ್ಟ್ ಘೋಷಣೆ
ಭಾರತೀಯ ಹವಾಮಾನ ಇಲಾಖೆ ದೆಹಲಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇಂದು ದೆಹಲಿಯಲ್ಲಿ ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಗುಡುಗು ಸಹಿತ ಗಾಳಿ ಮಳೆಯಾಗಲಿದೆ ಎಂದು ಹೇಳಿದೆ. ದೆಹಲಿಯ ಅನೇಕ ಬೀದಿಗಳು ಮತ್ತು ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಮೂಲಕ ಜನಜೀವನವು ತೊಂದರೆಗೆ ಸಿಲುಕಿದೆ. (ಏಜೆನ್ಸೀಸ್)