ನವದೆಹಲಿ: 2021ರ ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ನಡೆದ ರೈತರ ಹಿಂಸಾಚಾರ ಪ್ರಕರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪ್ರಮುಖ ಆರೋಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಪಂಜಾಬಿ ನಟ ದೀಪ್ ಸಿಧು ಮಂಗಳವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇದರ ನಡುವೆ ಸಿಧು ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕೆಂಪುಕೋಟೆ ಹಿಂಸಾಚಾರದಲ್ಲಿ ಸಿಕ್ಕಿಬಿದ್ದಿದ್ದೇ ಸಿಧು ಸಾವಿಗೆ ಕಾರಣ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಆರೋಪ. ಸಿಧು ಅಪಘಾತದಿಂದ ಮೃತಪಟ್ಟಿದ್ದಾರೆಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದರ ನಡುವೆ ಅಪಘಾತದ ವೇಳೆ ಸಿಧು ಜತೆ ಕಾರಿನಲ್ಲಿದ್ದ ಹಾಗೂ ಏರ್ ಬ್ಯಾಗ್ ನೆರವಿನಿಂದ ಬದುಕುಳಿದ ಸಿಧು ಗರ್ಲ್ಫ್ರೆಂಡ್ ರೀನಾ ರಾಯ್ ಭಾವುಕ ಸಂದೇಶವನ್ನು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
"ನಾನು ಮುರಿದು ಹೋಗಿದ್ದೇನೆ. ನನ್ನೊಳಗೆ ನಾನು ಸಹ ಸತ್ತಿದ್ದೇನೆ. ಜೀವಿತಾವಧಿಯಲ್ಲಿ ಎಂದಿಗೂ ಬಿಡುವುದಿಲ್ಲ ಎಂದು ನೀವು ನನಗೆ ಭರವಸೆ ನೀಡಿದ್ದೀರಿ, ದಯವಿಟ್ಟು ನಿಮ್ಮ ಸಂಗಾತಿಯ ಬಳಿಗೆ ಹಿಂತಿರುಗಿ, ನಿಮ್ಮ ಭರವಸೆಯನ್ನು ಉಳಿಸಿಕೊಳ್ಳಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನನ್ನ ಪ್ರೀತಿಯ ಹುಡುಗ ನೀನು. ನನ್ನ ಹೃದಯ ಬಡಿತ ನೀನು. ನಾನಿಂದು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದೆ. ನೀನು ಬಂದು ನನ್ನ ಕಿವಿಯಲ್ಲಿ ಐ ಲವ್ ಯು ಜಾನ್ ಎಂದು ಪಿಸುಗುಟ್ಟಿದ್ದು ಕೇಳಿದೆ. ನನಗೆ ಗೊತ್ತು ನೀವು ಯಾವಾಗಲು ನನ್ನ ಜತೆಯಲ್ಲಿ ಇರುತ್ತೀಯ. ನಾವು ನಮ್ಮ ಭವಿಷ್ಯವನ್ನು ಒಟ್ಟಿಗೆ ಯೋಜಿಸುತ್ತಿದ್ದೆವು. ಆದರೆ, ಈಗ ನೀವು ನನ್ನನ್ನು ಬಿಟ್ಟು ಹೋಗಿದ್ದೀರಿ. ನಾವಿಬ್ಬರು ಒಬ್ಬರನ್ನೊಬ್ಬರು ಬಿಡುವುದಿಲ್ಲ ಮತ್ತು ನಾನು ನಿಮ್ಮನ್ನು ಇನ್ನೊಂದು ಬದಿಯಲ್ಲಿ ನೋಡುತ್ತೇನೆ ಎಂದು ರೀನಾ ಬರೆದುಕೊಂಡಿದ್ದಾರೆ.
ದೀಪ್ ಸಿಧು ಮತ್ತು ರೀನಾ ರೈ ಒಂದೆರಡು ವರ್ಷಗಳಿಂದ ಒಟ್ಟಿಗೆ ಇದ್ದರು. ರೀನಾ ಬಗ್ಗೆಯು ಈ ಹಿಂದೆ ಸಿಧು ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಬರೆದಿದ್ದರು. “ಇಡೀ ಜಗತ್ತು ನನ್ನ ವಿರುದ್ಧವಾಗಿ ನಿಂತಿದ್ದಾಗ ನೀವು ನನ್ನ ಪರ ನಿಂತಿದ್ದೀರಿ, ನನ್ನನ್ನು ರಕ್ಷಿಸಿದ್ದೀರಿ, ನನ್ನ ಗೌರವವನ್ನು ಹಿಡಿದಿದ್ದೀರಿ, ನನಗೆ ಶಕ್ತಿಯನ್ನು ನೀಡಿದ್ದೀರಿ, ನನ್ನ ಸ್ವಾತಂತ್ರ್ಯಕ್ಕಾಗಿ ಪ್ರಾರ್ಥಿಸಿದ್ದೀರಿ. ಇದೆಲ್ಲ ನಿಜವಾಗಿಯೂ ನನ್ನ ಹೃದಯ ಮತ್ತು ಆತ್ಮವನ್ನು ಮುಟ್ಟಿದೆ. ನಿಮ್ಮಂತಹ ಸಂಗಾತಿಯನ್ನು ಹೊಂದಲು ನಾನು ನಿಜವಾಗಿಯೂ ಆಶೀರ್ವಾದ ಪಡೆದಿದ್ದೇನೆಂದು ಹೇಳಲು ಬಯಸುತ್ತೇನೆ ಎಂದು ಸಿಧು ಬರೆದುಕೊಂಡಿದ್ದರು.
ನಡೆದಿದ್ದೇನು? ದೆಹಲಿಯನ್ನು ಬೈಪಾಸ್ ಮಾಡುವ ಕುಂಡ್ಲಿ-ಮನೇಸರ್-ಪಲವಲ್ (ಕೆಎಂಪಿ) ಹೆದ್ದಾರಿಯನಲ್ಲಿ ಅಪಘಾತ ನಡೆದಿತ್ತು. ದೆಹಲಿಯಿಂದ ಪಂಜಾಬ್ನ ಭಟಿಂಡಾಗೆ ಗರ್ಲ್ಫ್ರೆಂಡ್ ರೀನಾ ಜತೆ ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ತೆರಳುವಾಗ ಟ್ರೈಲರ್ ಟ್ರಕ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಿಧು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಸಾವಿಗೀಡಾಗಿರುವುದಾಗಿ ವೈದ್ಯರು ಘೋಷಣೆ ಮಾಡಿದರು.
ಕೆಂಪುಕೋಟೆ ಹಿಂಸಾಚಾರ
ಕೆಂಪುಕೋಟೆಯಲ್ಲಿ ರೈತರ ಹಿಂಸಾಚಾರದ ಬಳಿಕ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದ. ದೀಪ್ ಸಿಧು ಮತ್ತು ಇತರೆ ಮೂವರು ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಣೆ ಮಾಡಿದ್ದರು. ಇದಾದ ಬಳಿಕ ಸಿಧುವನ್ನು ದೆಹಲಿ ಪೊಲೀಸರು 2021ರ ಫೆ. 9ರಂದು ಬಂಧಿಸಿದ್ದರು.
ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟುಮಾಡುವುದನ್ನು ತಡೆಯುವ ಕಾಯ್ದೆ ಸೇರಿದಂತೆ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳು ಮತ್ತು ಉಳಿದಿರುವ ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ, ಕೊಲೆ ಯತ್ನ ಪ್ರಕರಣ (307), ಸೆಕ್ಷನ್ 152 ರ ಅಡಿಯಲ್ಲಿ ದಂಗೆಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾಗ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಆರೋಪಗಳ ಅಡಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೀಪ್ ಸಿಧು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಗಲಭೆಗೆ ಕುಮ್ಮಕ್ಕು ನೀಡುವ ಆರೋಪದ ಕುರಿತು ಬಹಿರಂಗಗೊಳ್ಳುತ್ತಿದ್ದಂತೆಯೇ ನಟ ದೀಪ್ ಸಿಧು ನಾಪತ್ತೆಯಾಗಿದ್ದರು. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸದಸ್ಯರಾಗಿರುವ ದೀಪ್ ಸಿಧು ಅವರು ಪ್ರಚೋದಿತ ಭಾಷಣ ಮಾಡಿ, ಗುಂಪನ್ನು ಕೆಂಪು ಕೋಟೆಗೆ ಕರೆದೊಯ್ದರು ಎಂದು ರೈತ ಸಂಘಟನಗೆಳು ಆರೋಪಿಸಿದ್ದವು.
2021ರ ಜ. 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 86 ಮಂದಿ ಗಾಯಗೊಂಡಿದ್ದರು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿಗೆ ನಾಲ್ಕು ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು. ಅದಕ್ಕಾಗಿ ಕೆಲವೊಂದು ಷರತ್ತುಗಳನ್ನೂ ವಿಧಿಸಲಾಗಿತ್ತು. ಎಲ್ಲಾ ಷರತ್ತುಗಳನ್ನು ರೈತರು ಒಪ್ಪಿಕೊಂಡಿದ್ದರು. ಆದರೆ, ಉದ್ದೇಶಪೂರ್ವಕವಾಗಿಯೇ ಹಿಂಸಾಚಾರವು ನಡೆದಿತ್ತು. ಈ ವೇಳೆ ಕಂಡಕಂಡಲ್ಲಿ ಪೊಲೀಸರ ಮೇಲೂ ಹಲ್ಲೆ ನಡೆದಿತ್ತು. ಹಿಂಸಾಚಾರದ ಹಿಂದೆ ದೀಪ್ ಸಿಧು ಕೈವಾಡ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೀಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ದೀಪ್ ಸಿಧು ಅವರ ಚೊಚ್ಚಲ ಪಂಜಾಬಿ ಚಿತ್ರ ರಾಮತಾ ಜೋಗಿ 2015 ರಲ್ಲಿ ತೆರೆಗೆ ಬಂದಿತು. ಅವರ ಎರಡನೇ ಚಿತ್ರ ಜೋರಾ ದಾಸ್ ನುಂಬ್ರಿಯಾ 2018 ರಲ್ಲಿ ಹಿಟ್ ಆಯಿತು. (ಏಜೆನ್ಸೀಸ್)