ಲಖನೌ: ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಕಷ್ಟು ರಣತಂತ್ರ ಹೆಣೆಯುತ್ತಿರುವ ಕಾಂಗ್ರೆಸ್, ಚುನಾವಣೆಯಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಅದರಲ್ಲಿ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಹೆಸರು ಕೂಡ ಇದೆ. ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾದವರ ಬೆನ್ನಿಗೆ ಕಾಂಗ್ರೆಸ್ ಸದಾ ನಿಲ್ಲಲಿದೆ ಎಂಬ ಸಂದೇಶವನ್ನು ನಮ್ಮ ಹೊಸ ಅಭ್ಯರ್ಥಿಗಳ ಪಟ್ಟಿ ಸಾರಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
2017ರಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್, ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಈ ಆರೋಪದ ಮೇಲೆ 2019ರಲ್ಲಿ ಸೆಂಗಾರ್ನನ್ನು ಕೋರ್ಟ್ ಅಪರಾಧಿ ಎಂದು ಘೋಷಿಸಿದೆ.
ಈ ಘಟನೆ ಉನ್ನಾವೋ ಎಂಬಲ್ಲಿ ನಡೆದಿದ್ದರಿಂದ, ಉನ್ನಾವೋ ಅತ್ಯಾಚಾರ ಪ್ರಕರಣ ಎಂದು ರಾಷ್ಟ್ರಾದ್ಯಂತ ಸುದ್ದಿಯಾಯಿತು. ಅದರಲ್ಲೂ ಸಂತ್ರಸ್ತೆಯು ಪ್ರಕರಣದಲ್ಲಿ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದ ಬಳಿ ಆತ್ಮಹತ್ಯೆಗೆ ಯತ್ನಿಸಿದಾಗ ಈ ಪ್ರಕರಣ ಇಡೀ ರಾಷ್ಟ್ರಾದ್ಯಂತ ಭಾರೀ ಚರ್ಚೆಯಾಯಿತು. ಅಂದಿನಿಂದಲೂ ಈ ಪ್ರಕರಣ ದೇಶದ ಕರಾಳ ಅಧ್ಯಯಗಳಲ್ಲಿ ಒಂದಾಗಿದೆ.
ಸೆಂಗಾರ್ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ತನ್ನ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಸೆಂಗಾರ್, ಸಂತ್ರಸ್ತೆಯ ತಂದೆಯನ್ನು ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಬಂಧಿಸಿದ್ದ. ಪೊಲೀಸ್ ಕಸ್ಟಡಿಯಲ್ಲಿ ತೀವ್ರ ಕಿರುಕುಳದಿಂದಾಗಿ ಆತ ಮೃತಪಟ್ಟಿದ್ದ. ಈ ಎಲ್ಲ ಆರೋಪಗಳು ಸಾಬೀತಾದ್ದರಿಂದ 2020ರಲ್ಲಿ ಸೆಂಗಾರ್ಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡವನ್ನು ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. (ಏಜೆನ್ಸೀಸ್)