ನ್ಯೂಸ್

ಶ್ರೀರಾಮ ಯಾರೆಂಬುದು ತಮಿಳುನಾಡು ಜನತೆಗೆ ಗೊತ್ತೇ ಇಲ್ಲ ಎಂದ ಕಾಂಗ್ರೆಸ್​ ಸಂಸದೆಗೆ ನೆಟ್ಟಿಗರ ತರಾಟೆ!

ಚೆನ್ನೈ: ನಮ್ಮ ರಾಜ್ಯದ ಯಾರೊಬ್ಬರಿಗು ಶ್ರೀರಾಮ ಯಾರೆಂಬುದು ಗೊತ್ತೇ ಇಲ್ಲ ಎನ್ನುವ ಮೂಲಕ ತಮಿಳುನಾಡಿನ ಕಾಂಗ್ರೆಸ್​ ಸಂಸದೆ ಜ್ಯೋತಿಮಣಿ ವಿವಾದಕ್ಕೆ ಗುರಿಯಾಗಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿಮಣಿ ನಾನು ತಮಿಳುನಾಡು ಮೂಲದವಳು. ನನಗೆ ರಾಮ ಯಾರೆಂಬುದು ಗೊತ್ತಿಲ್ಲ. ತಮಿಳುನಾಡಿನಲ್ಲಿ ನೀವು ಯಾರನ್ನೇ ಕೇಳಿ ಅವರು ಕೂಡ ಇದೇ ಮಾತನ್ನು ಹೇಳುತ್ತಾರೆ. ನಾವು ಯಾವುದೇ ರಾಮ ದೇವಸ್ಥಾನವನ್ನು ನೋಡಿಲ್ಲ ಎಂದಿದ್ದಾರೆ.

ಜ್ಯೋತಿಮಣಿ ಅವರ ಸಂದರ್ಶನದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಂಸದೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಸಂಸದೆ ಜ್ಯೋತಿಮಣಿ ಅವರಿಗೆ ನಂದಗೋಪಾಲ್​ ಕೆ. ಎಂ. ಹೆಸರಿನ ನೆಟ್ಟಿಗ ಸರಿಯಾದ ತಿರುಗೇಟು ನೀಡಿದ್ದು, ತಮಿಳುನಾಡಿನಲ್ಲಿ ರಾಮನಿಗೆ ಸಮರ್ಪಿಸಿದ ದೇವಸ್ಥಾನಗಳಿವೆ. ತಿರುಚಿಯ ಶ್ರೀರಂಗಂ ಬಳಿ ಇರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ತಿರುವಣಾಮಲೈ ಸಮೀಪದ ಆದಿ ಶ್ರೀ ರಂಗಂ, ಪಲ್ಲಿಕೊಂಡದ ಶ್ರೀರಂಗನಾಥ ದೇವಸ್ಥಾನ. ಮದುರಂತಂಗಮ್​ನ ಏರಿ ಕತಾ ರಾಮರ್​ ದೇವಸ್ಥಾನ, ರಾಮೇಶ್ವರಂನ ರಾಮನಾಥ ಸ್ವಾಮಿ ದೇವಸ್ಥಾನ ಹೀಗಾಗಿ ಸಾಕಷ್ಟು ದೇವಸ್ಥಾನಗಳು ತಮಿಳುನಾಡಿನಲ್ಲಿ ಇವೆ ಎಂದು ಟ್ವೀಟ್​ ಮಾಡಿದ್ದಾರೆ. ಹೀಗೆ ಸಾಕಷ್ಟು ನೆಟ್ಟಿಗರು ಸಂಸದೆ ವಿರುದ್ಧ ಕಿಡಿಕಾರಿದ್ದಾರೆ. (ಏಜೆನ್ಸೀಸ್​)