ನಲ್ಗೊಂಡ: ಅಪಘಾತಗಳನ್ನು ತಡೆಯುವ ಉದ್ದೇಶದಿಂದ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿರುತ್ತಾರೆ. ಸವಾರರು ಬ್ಯಾರಿಕೇಡ್ಗಳನ್ನು ನೋಡುತ್ತಿದ್ದಂತೆ ವಾಹನಗಳ ವೇಗಕ್ಕೆ ಬ್ರೇಕ್ ಹಾಕುವುದನ್ನು ನೋಡಿದ್ದೇವೆ.
ಆದರೆ, ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿತ್ಯಾಲ ಪೊಲೀಸರು ಕಂಡು ಕೊಂಡಿರುವ ವಿನೂತನ ದಾರಿ ಈಗ ವಾಹನ ಸವಾರರ ಹುಬ್ಬೇರಿಸಿದೆ. ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ಸ್ ಅಳವಡಿಸಿರುವ ಚಿತ್ಯಾಲ ಪೊಲೀಸರು "ಹೆಣ್ಣು ಮಕ್ಕಳನ್ನಲ್ಲ, ಸರಿಯಾಗಿ ರಸ್ತೆ ನೋಡಿಕೊಂಡು ಗಾಡಿ ಓಡಿಸು" ಎಂದು ಬ್ಯಾರಿಕೇಡ್ ಮೇಲೆ ಬರೆದಿದ್ದಾರೆ.
ಬ್ಯಾರಿಕೇಡ್ಸ್ ನೋಡಿದ ಸವಾರರು ಬೆರಗಾಗಿ, ಒಂದು ಕ್ಷಣ ಮುಗುಳ್ನಕ್ಕಿ ಗಾಡಿ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬ್ಯಾರಿಕೇಡ್ ಫೋಟೋ ವೈರಲ್ ಆಗಿದ್ದು, ಪೊಲೀಸರ ವಿನೂತನ ಪ್ರಯತ್ನಕ್ಕೆ ಜೈ ಎಂದಿದ್ದಾರೆ. (ಏಜೆನ್ಸೀಸ್)