ನ್ಯೂಸ್

ಫ್ರೆಂಡ್​ ಆಯೋಜಿಸಿದ್ದ ಪಾರ್ಟಿಯಲ್ಲಿ ಬಿರಿಯಾನಿ ಜತೆ 1.45 ಲಕ್ಷ ರೂ. ಮೌಲ್ಯದ ಆಭರಣ ನುಂಗಿದ ವ್ಯಕ್ತಿ!

ಚೆನ್ನೈ: ಮೇ 3ರಂದು ಆಯೋಜಿಸಿದ್ದ ಈದ್​ ಪಾರ್ಟಿಯಲ್ಲಿ 32 ವರ್ಷದ ವ್ಯಕ್ತಿಯೊಬ್ಬ ಬಿರಿಯಾನಿ ಜತೆ 1.45 ಲಕ್ಷ ರೂ. ಮೌಲ್ಯದ ಆಭರಣವನ್ನು ನುಂಗಿ ನೀರು ಕುಡಿದಿದ್ದ ವಿರಳಾತಿ ವಿರಳ ಘಟನೆ ಚೆನ್ನೈ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.

ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ರಂಜಾನ್​ ಹಿನ್ನೆಲೆಯಲ್ಲಿ ಊಟಕ್ಕೆಂದು ತನ್ನೊಂದಿಗೆ ಕೆಲಸ ಮಾಡುವ ಸ್ನೇಹಿತೆಯರನ್ನು ಮನೆಗೆ ಆಹ್ವಾನಿಸಿದ್ದಳು. ಈ ವೇಳೆ ಸ್ನೇಹಿತೆಯ ಜತೆ ಆಕೆಯ ಬಾಯ್​ಫ್ರೆಂಡ್​ ಸಹ ಬಂದಿದ್ದ. ರುಚಿ ರುಚಿಯಾದ ಬಿರಿಯಾನಿ ಸವಿದ ಸ್ನೇಹಿತೆಯ ಬಾಯ್​ಫ್ರೆಂಡ್​ 1.45 ಲಕ್ಷ ರೂ. ಮೌಲ್ಯದ ಚಿನ್ನಾಭರವನ್ನು ಸಹ ಗುಳಂ ಮಾಡಿದ್ದ. ಆತ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಔತಣ ಕೂಟ ಮುಗಿದು ಅತಿಥಿಗಳು ತೆರಳಿದ ಬಳಿಕ ಪಾರ್ಟಿ ಆಯೋಜಿಸಿದ್ದ ಮಹಿಳೆ ಬೀರುವಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಅತಿಥಿಗಳನ್ನು ಪರಿಶೀಲಿಸಿದ ಬಳಿಕ ಊಟಕ್ಕೆ ಆಹ್ವಾನಿಸಿದ್ದ ಸ್ನೇಹಿತೆಯ ಬಾಯ್​ಫ್ರೆಂಡ್​ ಮೇಲೆ ಸಂಶಯ ಮೂಡಿದೆ. ಇದರ ಬೆನ್ನಲ್ಲೇ ವಿರುಗಂಬಕ್ಕಮ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೇ 4 ರಂದು ಸ್ನೇಹಿತೆಯ ಬಾಯ್​ಫ್ರೆಂಡ್​ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದ ನಂತರ ಆಭರಣಗಳು ಇನ್ನೂ ಇವೆ ಎಂಬುದು ದೃಢವಾಗಿದೆ. ಇದಾದ ಬಳಿಕ ವೈದ್ಯರು ಆರೋಪಿಗೆ ಎನಿಮಾ ಇಂಜಕ್ಷನ್​ ನೀಡಿ, ಗುರುವಾರ ಆತನಿಂದ 95,000 ರೂ.ಮೌಲ್ಯದ ಸರ ಹಾಗೂ 25,000 ರೂ.ಮೌಲ್ಯದ ಚಿನ್ನವನ್ನು ಹೊರ ತೆಗೆದಿದ್ದಾರೆ. ಆದಾಗ್ಯೂ, ಪೆಂಡೆಂಟ್ ಇನ್ನೂ ಅವನ ಹೊಟ್ಟೆಯೊಳಗೆ ಉಳಿದಿತ್ತು ಮತ್ತು ಅದನ್ನು ಹಿಂಪಡೆಯಲು ವೈದ್ಯರು ಅವನಿಗೆ ಬೇದಿಯಾಗುವ ಲಿಕ್ವಿಡ್​ ನೀಡಿ ಕೊನೆಗೂ ಎಲ್ಲವನ್ನು ಹೊರತೆಗೆದರು.

ನಡೆದಿದ್ದೇನು ಎಂಬ ಸಂಪೂರ್ಣ ಮಾಹಿತಿ ತಿಳಿದ ಬಳಿಕ ಪಾರ್ಟಿ ಆಯೋಜಿಸಿದ್ದ ಮಹಿಳೆ ಪ್ರಕರಣವನ್ನು ದಾಖಲಿಸಲು ಬಯಸದೇ ದೂರನ್ನು ಹಿಂತೆಗೆದುಕೊಂಡರು. ಸದ್ಯ ಆರೋಪಿ ಮೇಲೆ ಯಾವುದೇ ದೂರು ದಾಖಲಾಗದ ಕಾರಣ ಆತನನ್ನು ಪ್ರಕರಣದಿಂದ ಮುಕ್ತಗೊಳಿಸಲಾಗಿದೆ. (ಏಜೆನ್ಸೀಸ್​)