ಹೈದರಾಬಾದ್: ಇತ್ತೀಚೆಗೆ ಉತ್ತರ ಪ್ರದೇಶದ ಮತದಾರರಿಗೆ ಬೆದರಿಕೆ ಹಾಕಿದ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಹೈದರಾಬಾದ್ನ ಮಂಗಲಹತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದ ಚುನಾವಣಾ ಆಯೋಗ ನೀಡಿದ ನಿರ್ದೇಶದನದಂತೆ ರಾಜಾ ಸಿಂಗ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಹೈದರಾಬಾದ್ನ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಾಜಾ ಸಿಂಗ್ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಿವಾದಾತ್ಮ ಹೇಳಿಕೆ ನೀಡಿದ್ದರು.
ಮುಂದಿನ ಬಾರಿಯು ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ ಮತ ಹಾಕದವರ ಮನೆಗಳನ್ನು ಯೋಗಿ ನೇತೃತ್ವದ ಸರ್ಕಾರ ಜೆಸಿಬಿಯಿಂದ ನೆಲಸಮ ಮಾಡಲಿದೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ರಾಜಾ ಸಿಂಗ್ ಹೇಳಿಕೆಯನ್ನು ಗಮನಿಸಿದ ಚುನಾವಣಾ ಆಯೋಗ ತಕ್ಷಣ ಶಾಸಕರಿಗೆ ನೋಟಿಸ್ ನೀಡಿ, ಉತ್ತರ ನೀಡುವಂತೆ ಕೇಳಿತ್ತು. ಇದಾದ ಬೆನ್ನಲ್ಲೇ ಶನಿವಾರ ಪ್ರಕರಣ ದಾಖಲಿಸುವಂತೆ ಹೈದರಾಬಾದ್ ಪೊಲೀಸರಿಗೆ ನಿರ್ದೇಶನ ನೀಡಿತು. ಅದರಂತೆಯೇ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)