ನ್ಯೂಸ್

ಮಹಿಳಾ ಪೊಲೀಸ್​ ಅಧಿಕಾರಿ ಶೌಚಗೃಹ ತೆರಳುವುದನ್ನೇ ಕಾಯ್ತಿದ್ದ ಕಾನ್ಸ್​ಟೇಬಲ್​ನಿಂದ ನೀಚ ಕೆಲಸ

ಭೋಪಾಲ್​: ಮಹಿಳಾ ಕಾನ್ಸ್​ಟೇಬಲ್​ ಮೇಲಿನ ಗ್ಯಾಂಗ್​ರೇಪ್​ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಮಹಿಳಾ ಪೊಲೀಸ್​ ಅಧಿಕಾರಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಮಧ್ಯಪ್ರದೇಶದಿಂದ ವರದಿಯಾಗಿದೆ.

ಮಹಿಳಾ ಅಧಿಕಾರಿಯ ಕಾರು ಚಾಲಕ ಆಕೆಯ ಮನೆಯ ಬಾತ್​ರೂಮ್​ನಲ್ಲಿ ಕ್ಯಾಮೆರಾ ಇಟ್ಟು ಬೆತ್ತಲೇ ವಿಡಿಯೋ ಚಿತ್ರೀಕರಿಸಿರುವ ಆರೋಪ ಕೇಳಿಬಂದಿದೆ. ವಿಡಿಯೋ ಡಿಲೀಟ್​ ಮಾಡಬೇಕಾದರೆ 5 ಲಕ್ಷ ರೂಪಾಯಿ ಹಣ ಕೊಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದು, ಇದರಿಂದ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆ ಮಹಿಳಾ ಅಧಿಕಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕಾನ್ಸ್​ಟೇಬಲ್​ ಒಬ್ಬ ಮಹಿಳಾ ಅಧಿಕಾರಿಗೆ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಇದೇ ತಿಂಗಳ 22ರಂದು ಮಹಿಳಾ ಅಧಿಕಾರಿಯ ಮನೆಯನ್ನು ಪ್ರವೇಶಿಸಿರುವ ಕಾನ್ಸ್​ಟೇಬಲ್​ ಬಾತ್​ರೂಮ್​ ಬಾಗಿಲ ಕಿಂಡಿಯಲ್ಲಿ ಫೋನ್​ ಕ್ಯಾಮೆರಾ ಇಟ್ಟು ರೆಕಾರ್ಡ್​ ಮಾಡಿಕೊಂಡಿದ್ದಾನೆ. ಇದು ಗೊತ್ತಾದ ಕೂಡಲೇ ಸಂತ್ರಸ್ತೆ ತಕ್ಷಣ ಬಾಗಿಲು ತೆರೆದಾಗ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ಮತ್ತೆ ಮಹಿಳಾ ಅಧಿಕಾರಿಯ ಮನೆಗೆ ಸೆ. 26ರಂದು ತೆರಳಿದ ಕಾನ್ಸ್​ಟೇಬಲ್​ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಕೊಡದೇ ಇದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದಾದ ಬಳಿಕ ಮಹಿಳಾ ಅಧಿಕಾರಿ ಹಿರಿಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ತಕ್ಷಣ ಭೋಪಾಲ್​ ಅಪರಾಧ ವಿಭಾಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)