ನ್ಯೂಸ್

15 ನಿಮಿಷದ ಪ್ರಯಾಣಕ್ಕೆ 32 ಲಕ್ಷ ರೂ. ಬಿಲ್! ಉಬರ್​​ ಕೊಟ್ಟ ಶಾಕ್​ನಿಂದ ಪ್ರಯಾಣಿಕ ಹೊರಬಂದಿದ್ದು ಹೇಗೆ?

ಲಂಡನ್​​: ದುಬಾರಿ ಶುಲ್ಕ ವಸೂಲಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಆ್ಯಪ್​ ಆಧಾರಿತ ಅಗ್ರಿಗೇಟರ್​ ಕಂಪನಿಗಳಾದ ಓಲಾ, ಉಬರ್​ ಮತ್ತು ರ್ಯಾಪಿಡೋ ಸೇವೆಯನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದ್ದು, ಈ ವಿಚಾರವು ರಾಜ್ಯದಲ್ಲಿ ಭಾರಿ ಚರ್ಚೆಯಲ್ಲಿರುವಾಗಲೇ ಇಂಗ್ಲೆಂಡ್​ನಲ್ಲಿ ಉಬರ್​ಗೆ ಸಂಬಂಧಿಸಿದ ಹುಬ್ಬೇರಿಸುವ ಸಂಗತಿ ಬೆಳಕಿಗೆ ಬಂದಿದೆ.

ಕೇವಲ 15 ನಿಮಿಷದ ಪ್ರಯಾಣಕ್ಕೆ ಉಬರ್​ ಕಂಪನಿಯು ಬ್ರಿಟಿಷ್​ ಪ್ರಯಾಣಿಕರೊಬ್ಬರಿಗೆ 39,317 ಡಾಲರ್​ ಅಂದರೆ, 32 ಲಕ್ಷ ರೂಪಾಯಿ ಚಾರ್ಜ್​ ಮಾಡಿರುವುದನ್ನು ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ.

22 ವರ್ಷದ ಒಲಿವರ್​ ಕಪ್ಲಾನ್​ ಅವರು ಇತ್ತೀಚೆಗೆ ಉಬರ್​ ಕಾರನ್ನು ಆ್ಯಪ್​ನಲ್ಲಿ ಬುಕ್​ ಮಾಡಿದ್ದರು. ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿರುವ ಬುಕ್ಸ್ಟನ್​ ಹೋಟೆಲ್​ನಲ್ಲಿ ಶೆಫ್​ ಆಗಿರುವ ಕಪ್ಲಾನ್​ ತಮ್ಮ ಕೆಲಸವನ್ನು ಮುಗಿಸಿದ ಬಳಿಕ ಹೋಟೆಲ್​ನಿಂದ 4 ಮೈಲಿ ದೂರದ ವಿಚ್​ವುಡ್​ನಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಉಬರ್​ ಕಾರು ಬುಕ್​ ಮಾಡಿದ್ದರು.

ಸಾಮಾನ್ಯವಾಗಿ ನಾನು ಕೆಲಸದಿಂದ ಮನೆಗೆ ಹೋಗುವ ದಾರಿಯಲ್ಲಿ ಆಗಾಗ ಉಬರ್ ಕಾರನ್ನು ಬುಕ್​ ಮಾಡುತ್ತೇನೆ. ನಾನು ಪ್ರಯಾಣಿಸಿದಾಗಲೆಲ್ಲ 11 ರಿಂದ 12 ಡಾಲರ್​ ವೆಚ್ಚವಾಗುತ್ತದೆ. ಆದರೆ, ಅಂದು ನಾನು ಬುಕ್​ ಮಾಡಿದ್ದ ಸಮಯಕ್ಕೆ ಸರಿಯಾಗಿ ಬಂದ ಉಬರ್​ ಚಾಲಕ, ನನ್ನನ್ನು ಪಿಕಪ್​ ಮಾಡಿಕೊಂಡು ಹೊರಟನು. ಅದು 15 ನಿಮಿಷದ ಪ್ರಯಾಣವಾಗಿತ್ತು ಎಂದು ಕಪ್ಲಾನ್​ ಹೇಳಿದರು.

ಎಲ್ಲವು ಕಪ್ಲಾನ್​ ಅಂದುಕೊಂಡಂತೆ ನಡೆದಿತ್ತು. ಆದರೆ, ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಕಪ್ಲಾನ್​ಗೆ ಒಂದು ಶಾಕ್​ ಕಾದಿತ್ತು. ಆತನ​ ಮೊಬೈಲ್​ಗೆ ಉಬರ್​ನಿಂದ ಒಂದು ಮಸೇಜ್​ ಬಂದಿತ್ತು. 35 ಸಾವಿರ ಪೌಂಡ್​ ಅಂದರೆ, 39,317 ಡಾಲರ್​ ಚಾರ್ಜ್​ ಮಾಡಿರುವುದಾಗಿ ಮೆಸೇಜ್​ ಮಾಡಿದ್ದರು. ಭಾರತೀಯ ಕರೆನ್ಸಿ ಪ್ರಕಾರ 32 ಲಕ್ಷ ರೂಪಾಯಿ ಚಾರ್ಜ್​ ಮಾಡಲಾಗಿತ್ತು. ಒಂದು ಕ್ಷಣವೂ ಸಮಯ ವ್ಯರ್ಥ ಮಾಡದ ಕಪ್ಲಾನ್​, ಉಬರ್​ ಕಸ್ಟಮರ್​ ಕೇರ್​ಗೆ ಫೋನಾಯಿಸಿ, ದುಬಾರಿ ಬಿಲ್​ ಬಗ್ಗೆ ವಿಚಾರಿಸಿದ್ದಾರೆ. ನನ್ನ ಬ್ಯಾಂಕ್​ ಖಾತೆಯಲ್ಲಿ ಕಡಿಮೆ ಹಣ ಇದ್ದಿದ್ದರಿಂದ ಸಾಕಷ್ಟು ಮೊತ್ತ ಇಲ್ಲ ಎಂದು ಬಂದಿದೆ. ಒಂದು ವೇಳೆ ಹಣ ಇದ್ದಿದ್ದರೆ ಎಲ್ಲವನ್ನು ಡ್ರಾ ಮಾಡಿಕೊಳ್ಳುತ್ತಿದ್ದರು. ಆದರೆ, ನಾನು ಬಿಡುತ್ತಿರಲಿಲ್ಲ. ಹಣವನ್ನು ಮರಳಿ ಪಡೆಯುತ್ತಿದ್ದೆ ಎಂದು ಕಪ್ಲಾನ್​ ಹೇಳಿದ್ದಾರೆ.

ಕಪ್ಲಾನ್​ ಪಾರಾಗಿದ್ದು ಹೇಗೆ?

ಎಡವಟ್ಟು ಆಗಿದ್ದೇನೆಂದರೆ, ಉಬರ್​ ಚಾಲಕ, ಶೆಫ್​ ಕಪ್ಲಾನ್​ ತಲಪುವ ಸ್ಥಳವನ್ನು ಆಸ್ಟ್ರೇಲಿಯಾ ಎಂದು ಬದಲಾಯಿಸಿದ್ದ. ಇದಕ್ಕೆ ಕಾರಣ ಏನು ಎಂಬುದು ಖಚಿತವಾಗಿಲ್ಲದಿದ್ದರೂ, ಮ್ಯಾಂಚೆಸ್ಟರ್‌ನಲ್ಲಿರುವ ವಿಚ್‌ವುಡ್ ಬಾರ್‌ ಮತ್ತು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ವಿಚ್‌ವುಡ್ ಪಾರ್ಕ್‌ ಹೆಸರಿನ ಗೊಂದಲದಿಂದ ಹೀಗಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಉಬರ್​ ಕೂಡ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದೆ.

ಈ ಪ್ರಕರಣ ನನ್ನನ್ನು ಎಲ್ಲಾ ರೀತಿಯ ಆರ್ಥಿಕ ತೊಂದರೆಗೆ ಸಿಲುಕಿಸಬಹುದಿತ್ತು. ಅದೃಷ್ಟವಶಾತ್ ಉಬರ್ ಅವರು ಆ ರೀತಿ ಮಾಡಲಿಲ್ಲ. ತಕ್ಷಣವೇ ಆಗಿರುವ ಸಮಸ್ಯಯನ್ನು ನೀಗಿಸಿದರು. ಆದರೆ, ಸಮಸ್ಯೆ ತಿಳಿದುಕೊಳ್ಳುವ ಮುನ್ನ ಅರ್ಧ ಗಂಟೆ ತುಂಬಾ ಹಿಂಸೆ ಅನುಭವಿಸಿದೆ ಎಂದು ಕಪ್ಲಾನ್​ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)