ನ್ಯೂಸ್

ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ತೆರಿಗೆ ಮುಕ್ತಕ್ಕೆ ಬೇಡಿಕೆ: ಸಿಎಂ ಕೇಜ್ರಿವಾಲ್​ ಉತ್ತರ ಕೇಳಿ ದಂಗಾದ ಬಿಜೆಪಿಗರು!

ನವದೆಹಲಿ: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ದಿ ಕಾಶ್ಮೀರ್​ ಫೈಲ್ಸ್​ ಚಿತ್ರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಕೆಸರೆರಚಾಟಕ್ಕೂ ಇದು ಕಾರಣವಾಗಿದೆ. ಇದರ ನಡುವೆ ಗುರುವಾರ ದೆಹಲಿ ವಿಧಾನಸಭಾ ಬಜೆಟ್​ ಅಧಿವೇಶನದಲ್ಲಿ ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ತೆರಿಗೆ ಮುಕ್ತ ಅವಕಾಶ ನೀಡವಂತೆ ಬೇಡಿಕೆ ಇಟ್ಟ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ತಿರುಗೇಟನ್ನು ನೀಡಿದ್ದಾರೆ.

ತೆರಿಗೆ ಮುಕ್ತ ಮಾಡುವುದನ್ನು ಕೇಳುವ ಬದಲು ಕಾಶ್ಮೀರ್​ ಫೈಲ್ಸ್​ ಚಿತ್ರವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡುವಂತೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರನ್ನು ಕೇಳಿರಿ, ಆಗ ಎಲ್ಲರೂ ಉಚಿತವಾಗಿ ಸಿನಿಮಾವನ್ನು ವೀಕ್ಷಣೆ ಮಾಡಬಹುದು ಎಂದು ಕೇಜ್ರಿವಾಲ್​, ಬಿಜೆಪಿಗರಿಗೆ ತಿರುಗೇಟು ನೀಡಿದರು.

ಬುಧವಾರ ನಡೆದ ವಿಧಾನಸಭೆ ಅಧಿವೇಶನಕ್ಕೆ ಅಡ್ಡಿಪಡಿಸಿ, ಕಾಶ್ಮೀರ ಫೈಲ್ಸ್​ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸುವಂತೆ ಬಿಜೆಪಿ ಶಾಸಕರು ಒತ್ತಾಯಿಸಿದ ಒಂದು ದಿನದ ನಂತರ ಸಿಎಂ ಕೇಜ್ರಿವಾಲ್ ಉತ್ತರ ನೀಡಿದ್ದಾರೆ. ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಮತ್ತು ನಿಮಗೆ ಕೇವಲ ಪೋಸ್ಟರ್‌ಗಳನ್ನು ಹಾಕುವ ಕೆಲಸವನ್ನು ನೀಡಲಾಗಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿಯನ್ನುದ್ದೇಶಿಸಿ ಕೇಜ್ರಿವಾಲ್ ವ್ಯಂಗ್ಯವಾಡಿದರು.

ಬಿಹಾರ, ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ತ್ರಿಪುರಾ, ಗೋವಾ ಮತ್ತು ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಶ್ಮೀರ್​ ಫೈಲ್ಸ್​ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. (ಏಜೆನ್ಸೀಸ್​)