ನ್ಯೂಸ್

ಬೆಂಗ್ಳೂರಿಗರೇ ಎಚ್ಚರ ಮಾಜಿ ಸಿಎಂ ಪತ್ನಿಯ ಟ್ರಾಫಿಕ್​​ ಜಾಮ್​ ಹೇಳಿಕೆ ನಿಮ್ಮ ಮದ್ವೆಗೆ ಮಾರಕ: ಹರಿದಾಡ್ತಿದೆ ಮೀಮ್ಸ್​!

ಮುಂಬೈ: ಟ್ರಾಫಿಕ್‌ ಕಿರಿಕಿರಿಯಿಂದ ಮುಂಬೈನಲ್ಲಿ ಡಿವೋರ್ಸ್ ಪ್ರಕರಣಗಳೂ ಹೆಚ್ಚುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ನೀಡಿರುವ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್​ ಭರಾಟೆ ಜೋರಾಗಿದೆ.

ನಿನ್ನೆ ಮಾಧ್ಯಮದೊಂದಿಗೆ ಮಾತನಾಡುವಾಗ ನಾನು ಮಾಜಿ ಸಿಎಂ ಪತ್ನಿಯಾಗಿ ಅಲ್ಲ, ಬದಲಿಗೆ ಸಾಮಾನ್ಯ ನಾಗರಿಕಳಾಗಿ ಹೇಳುತ್ತಿದ್ದೇನೆ, ನಾನು ಒಮ್ಮೆ ಹೊರಗೆ ಹೋದಾಗ ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತೇನೆ. ಟ್ರಾಫಿಕ್ ಕಾರಣ, ಜನರು ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದ್ದರು. ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಗಳು ಟ್ರಾಫಿಕ್​ ಸಮಸ್ಯೆಯಿಂದಲೇ ಉಂಟಾಗುತ್ತಿದೆ ಎಂಬ ಅಂಕಿ ಅಂಶವನ್ನೂ ಅವರು ನೀಡಿದ್ದಾರೆ. ಜನಜೀವನದ ಮೇಲೆ ಟ್ರಾಫಿಕ್​ ಸಮಸ್ಯೆ ಭಾರಿ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಮುಂಬೈನ ರಸ್ತೆಗಳ ಕಳಪೆ ಸ್ಥಿತಿ ಮತ್ತು ಡಿವೋರ್ಸ್​ ನಡುವಿನ ವಿಲಕ್ಷಣ ಸಹ ಸಂಬಂಧವನ್ನು ಕಲ್ಪಿಸಿದ ಅಮೃತಾ ಫಡ್ನಾವೀಸ್​ ಹೇಳಿಕೆಗೆ ನೆಟ್ಟಿಗರ ಪ್ರತಿಕ್ರಿಯೆಗಳು ಹರಿದುಬರುತ್ತಿದ್ದು, ಕೆಲವರು ತಮ್ಮದೇ ಆದ ತಮಾಷೆಯ ಮೀಮ್ಸ್​ಗಳ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಸಾಮಾನ್ಯವಾಗಿ ಪತ್ನಿ ಅಥವಾ ಪತಿ ಮನೆಗೆ ಬೇಗ ಬಂದಾಗ ಎಷ್ಟೋ ಅಕ್ರಮ ಸಂಬಂಧಗಳು ಬಯಲಾಗಿ, ಡಿವೋರ್ಸ್​ ಆಗಿರುವ ಬಗ್ಗೆ ಕೆಲವೊಂದು ಸ್ಟೋರಿಗಳನ್ನು ಓದಿದ್ದೇನೆ. ಹೀಗಾಗಿ ನೀವು ಉತ್ತಮ ಟ್ರಾಫಿಕ್​ ಅನ್ನು ದೂಷಿಸಬೇಕೋ ಹೊರತು ಟ್ರಾಫಿಕ್​ ಜಾಮ್​ ಅಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ ಪಕ್ಷದ ನಾಯಕಿ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, ಫಡ್ನವಿಸ್ ಅವರ ಹೇಳಿಕೆಯಲ್ಲಿ ತರ್ಕವಿಲ್ಲ ಎಂದಿದ್ದಾರೆ. ನಿಮ್ಮ ಮದುವೆಗೆ ಅಮೃತಾ ಅವರ ಹೇಳಿಕೆ ಅಪಾಯಕಾರಿ ಆಗಬಹುದು. ಹೀಗಾಗಿ ಅವರ ಹೇಳಿಕೆಗೆ ಗಮನ ಕೊಡಬೇಡಿ ಪ್ರಿಯಾಂಕಾ ಬೆಂಗಳೂರಿಗರನ್ನು ಕೇಳಿಕೊಂಡಿದ್ದಾರೆ.

ಶೇ. 3 ರಷ್ಟು ಮುಂಬೈ ಮಂದಿ ಟ್ರಾಫಿಕ್‌ ಜಾಮ್​ನಿಂದಾಗಿ ವಿಚ್ಛೇದನ ಹೊಂದುತ್ತಿದ್ದಾರೆ ಎಂದು ಹೇಳುವ ಈ ಮಹಿಳೆ (ಅಮೃತಾ ಫಡ್ನಾವೀಸ್​)ಗೆ ದಿನದ ಅತ್ಯುತ್ತಮ (ಇಲ್) ಲಾಜಿಕ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ದಯವಿಟ್ಟು ಬ್ರೇಕ್ ಮೇಲೆ ನಿಮ್ಮ ಮನಸ್ಸು ಮಾಡುವ ಬದಲು ರಜೆಯನ್ನೇ ತೆಗೆದುಕೊಳ್ಳಿ. ಬೆಂಗಳೂರಿನ ಕುಟುಂಬಗಳು ದಯವಿಟ್ಟು ಇದನ್ನು ಓದುವುದನ್ನು ತಪ್ಪಿಸಿ, ಏಕೆಂದರೆ, ನಿಮ್ಮ ಮದುವೆಗೆ ಮಾರಕವಾಗಬಹುದು ಎಂದು ಮತ್ತೊಬ್ಬ ನೆಟ್ಟಿಗರ ಟ್ವೀಟ್ ಮಾಡಿದ್ದಾರೆ.

ಹೀಗೆ ಸಾಕಷ್ಟು ಮಂದಿ ಅಮೃತಾ ಫಡ್ನಾವೀಸ್​ ಅವರ ಹೇಳಿಕೆ ಮೀಮ್ಸ್​ಗಳನ್ನು ಹರಿಬಿಡುವ ಮೂಲಕ ಮಾಜಿ ಸಿಎಂ ಪತ್ನಿಯ ಕಾಲೆಳೆಯುತ್ತಿದ್ದಾರೆ. (ಏಜೆನ್ಸೀಸ್​)