ನ್ಯೂಸ್

ಬೇರೆ ಯಾರಾದ್ರೂ ಸಮರ್ಥರಿಗೆ ನೀರಾವರಿ ಖಾತೆ ಒಪ್ಪಿಸಿ ಪಾರ್ಟ್​​ ಟೈಮ್​ ಸಚಿವರಿಗಲ್ಲ! ಆರ್​.ಅಶೋಕ ಟಾಂಗ್

ಮೋಹನ್​ ಶೆಟ್ಟಿ

ಬೆಂಗಳೂರು: ಹೊಸಪೇಟೆಯ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಕಳಚಿ ಬಿದ್ದಿದ್ದು, ಅಧಿಕ ನೀರು ಡ್ಯಾಂನಿಂದ ಹೊರಹೋಗುತ್ತಿದೆ. ಸದ್ಯ ಈ ವಿಷಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಎದುರು ಗುಡುಗಿದ್ದ ಆರ್​. ಅಶೋಕ, ಇದೀಗ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್​ ವಿರುದ್ಧ ವ್ಯಂಗ್ಯವಾಡಿದ್ದಾರೆ.

"ನಾಡಿನ ರೈತರ ಜೀವನಾಡಿ ಆಗಿರುವ ಜಲಾಶಯಗಳ ನಿರ್ವಹಣೆ ಬಗ್ಗೆ ರಾಜ್ಯ ಕಾಂಗ್ರೆಸ್​ ಸರ್ಕಾರದ ಅಸಡ್ಡೆ, ನಿರ್ಲಕ್ಷ್ಯದಿಂದ ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತ ಸಂಭವಿಸಿರುವ ಬೆನ್ನಲ್ಲೇ, ಈಗ ಮತ್ತೊಂದು ಅಣೆಕಟ್ಟು ಅಪಾಯದ ಅಂಚಿನಲ್ಲಿರುವುದು ಬೆಳಕಿಗೆ ಬಂದಿದೆ. ಗದಗ ಮತ್ತು ವಿಜಯನಗರ ಜಿಲ್ಲೆಗಳ ನೀರಾವರಿಗಾಗಿ ಅನುಷ್ಠಾನಗೊಂಡ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಹಮ್ಮಗಿ ಬ್ಯಾರೇಜ್​ನ ಗೇಟ್​ಗಳ ದುರಸ್ತಿಗೆ ಬಂದಿವೆ. ಒಂದು ವರ್ಷದ ಹಿಂದೆಯೇ ಮುನ್ಸೂಚನೆ ನೀಡಿದ್ದರೂ ಸಹ ಸರ್ಕಾರ ಇದುವರೆಗೂ ಗೇಟ್​ ದುರಸ್ತಿ ಕಾರ್ಯ ಆರಂಭಿಸಿಲ್ಲ" ಎಂದು ಆರೋಪಿಸಿದರು.

"ಸಿಎಂ ಸಿದ್ದರಾಮಯ್ಯನವರೇ ಹಮ್ಮಗಿ ಬ್ಯಾರೇಜ್​ನ 5-6 ಗೇಟುಗಳು ಶಿಥಿಲಗೊಂಡಿರುವ ವರದಿ ಇದೆ. ತಮ್ಮ ಪಾರ್ಟ್​ ಟೈಮ್​ ನೀರಾವರಿ ಸಚಿವರಾದ ಡಿಕೆಶಿ ಅವರಿಗೆ ಇಲಾಖೆ ನಿರ್ವಹಿಸಲು ಪುರುಸೊತ್ತಿಲ್ಲದಿದ್ದರೆ, ನೀರಾವರಿ ಖಾತೆಯನ್ನು ಬೇರೆ ಯಾರಾದರೂ ಸಮರ್ಥ ಸಚಿವರಿಗೆ ಒಪ್ಪಿಸಿ. ಅದು ಬಿಟ್ಟು ಒಬ್ಬ ಪಾರ್ಟ್​ ಟೈಮ್​ ಮಂತ್ರಿ, ಪುಟ್​ ಟೈಮ್ ಕೆಪಿಸಿಸಿ ಅಧ್ಯಕ್ಷರಿಗೆ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಅಂತಹ ಪ್ರಮುಖ ಖಾತೆ ನೀಡಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವುದು ಬೇಡ. ನಿಮ್ಮ ರಾಜಕೀಯ ತೆವಲಿಗೆ ಡ್ಯಾಂ ನಿರ್ಲಕ್ಷಿಸಿ ಅನ್ನದಾತರು, ಜನ ಸಾಮಾನ್ಯರ ಬದುಕನ್ನು ಅಪಾಯಕ್ಕೆ ತಳ್ಳಬೇಡಿ" ಎಂದು ಕಿಡಿಕಾರಿದರು.