ನ್ಯೂಸ್

ಬೆಲೆ ಏರಿಕೆ ವಿರೋಧಿ ಹೋರಾಟಕ್ಕೆ ತಾರ್ಕಿಕ ಅಂತ್ಯ: ಆರ್.ಅಶೋಕ್ ಎಚ್ಚರಿಕೆ | Cong govt deceived the people

ಬೆಂಗಳೂರು: ಗ್ಯಾರಂಟಿಗಳು ಜನರ ಬದುಕು ಸುಧಾರಿಸಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಜನರ ತಲೆ ಮೇಲೆ ಸಾಲ, ಬೆಲೆಗಳ ಏರಿಕೆ ಭಾರ ಹೊರಿಸುತ್ತಿದೆ. ಕಾಂಗ್ರೆಸ್ ಗೆ ಮತ ನೀಡಿದ ಜನರು ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಟುವಾಗಿ ಟೀಕಿಸಿದರು.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ನಿರತರನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ನೀತಿ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದ್ದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆ ಮೂಲಕ ಕಳ್ಳತನ ಮಾಡಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಕಮಿಷನ್ ಮೂಲಕ ಕಳ್ಳತನ ಮಾಡುತ್ತಿದ್ದಾರೆ. ಸತ್ತಾಗ ಹೆಣದ ಮೇಲೆ ಹಣ ಹಾಕುವ ಪದ್ಧತಿ ಇದೆ. ಕಾಂಗ್ರೆಸ್ ಸರ್ಕಾರ ಮರಣ ಪ್ರಮಾಣ ಪತ್ರಕ್ಕೂ ಶುಲ್ಕ ಏರಿಸಿ ಹಣ ಸಂಗ್ರಹ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.

ಮುಂದೆ ನೀರಿನ ದರ ಏರಿಕೆ

ಮದ್ಯದ ದರವನ್ನೂ ಏರಿಸಿ ಮದ್ಯಪ್ರಿಯರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಶೌಚಾಲಯ ನಿರ್ವಹಣೆ ಮಾಡಲು ಕೂಡ ಸರ್ಕಾರದ ಬಳಿ ದುಡ್ಡಿಲ್ಲ. ಬೆಂಗಳೂರಿನ ಜನರಿಗೆ ಮುಂದೆ ನೀರಿನ ಶುಲ್ಕ ಏರಿಕೆಯ ಶಾಕ್ ಕೂಡ ಕಾದಿದೆ ಎಂದು ಆರ್.ಅಶೋಕ್ ಹೇಳಿದರು.

ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಸರ್ಕಾರ, ಕುಟುಂಬದ ಯಜಮಾನಿಗೆ ಸಹಾಯಧನ ನೀಡಿ, ಯಜಮಾನನಿಂದ ಹಣ ವಸೂಲಿ ಮಾಡುತ್ತಿದೆ. ಗ್ಯಾರಂಟಿಗಳು ಜನರ ಬದುಕು ಉದ್ಧರಿಸಿದ ಬಗೆಯಿದು ಎಂದು ಛೇಡಿಸಿದರು.

ಆಯವ್ಯಯದಲ್ಲಿ ಜನರ ಮೇಲೆ ಹಾಕುವ ತೆರಿಗೆಗಳ ಬಗ್ಗೆ ಸರಿಯಾಗಿ ತಿಳಿಸಬೇಕಿತ್ತು. ಆದರೆ ಬಜೆಟ್ ಮುಗಿದ ನಂತರ ತೆರಿಗೆಗಳನ್ನು ಏರಿಸಲಾಗಿದೆ. ಜನರಿಗೆ ಯಾಮಾರಿಸಿಯೇ ಅಧಿಕಾರಕ್ಕೆ ಬಂದವರು, ಮತ್ತದೇ ರೀತಿ ಯಾಮಾರಿಸುವ ಕೆಲಸ ಮುಂದುವರಿಸಿದ್ದಾರೆ.

ವಕ್ಫ್ ಮಂಡಳಿ ರೈತರ ಜಮೀನುಗಳನ್ನು ಕಬಳಿಸುತ್ತಿತ್ತು. ಅದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಕಾಯ್ದೆ ತಿದ್ದುಪಡಿ ತಂದಿದ್ದಾರೆ. ಬಡ ಮುಸ್ಲಿಮರ ಏಳಿಗೆಗೂ ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿದ್ದು, ಇದನ್ನು ಕೂಡ ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದೆ ಎಂದು ದೂರಿದರು.

ಬಿಜೆಪಿ ನಾಯಕರು ಪ್ರತಿಭಟಿಸಿದಾಗ ಬಸ್‌ಗಳನ್ನು ತಂದು ಅದರಲ್ಲಿ ಬಂಧಿಸಿ ಇರಿಸಲಾಗುತ್ತದೆ. ಆದರೆ ಈಗ ಬಸ್‌ಗಳಿಗೆ ಕೊರತೆಯಿದೆ. ಬಸ್ ತರುವ ಯೋಗ್ಯತೆಯೂ ಸರ್ಕಾರಕ್ಕೆ ಇಲ್ಲ ಎಂದು ಆರ್.ಅಶೋಕ್ ಚಾಟಿ ಬೀಸಿದರು.