ಬೆಂಗಳೂರು: ಅವಹೇಳನಕಾರಿ ಸಂದೇಶ ಹಂಚಿಕೆ ನೆಪ ಮಾಡಿಕೊಂಡು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಮತಾಂಧರು ದಾಳಿ ಮಾಡಿದ್ದು, ಇಂತಹ ದುಷ್ಕರ್ಮಿಗಳಿಗೆ ನಿರ್ದಾಕ್ಷಿಣ್ಯವಾಗಿ ಎಡೆಮುರಿ ಕಟ್ಟಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಐದಾರು ಚೀಲಗಳಲ್ಲಿ ಕಲ್ಲು ತುಂಬಿಕೊಂಡು ತಂದು ಠಾಣೆ ಮೇಲೆ ಸೋಮವಾರ ಸಂಜೆ ದಾಳಿ ಮಾಡಿದ್ದಾರೆ. ಈ ದಾಂಧಲೆಯಲ್ಲಿ ಪೊಲೀಸ್ ಅಧಿಕಾರಿ ಸೇರಿ ಹಲವಾರು ಪೊಲೀಸರಿಗೆ ಗಾಯಗಳಾಗಿವೆ.
ಅಷ್ಟೇ ಅಲ್ಲ, ಪೊಲೀಸರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಕ್ಕಪಕ್ಕದ ಹಿಂದುಗಳಿಗೆ ಬೆದರಿಕೆ ಹಾಕಿದ್ದಾರೆ. ಇದೊಂದು ವ್ಯವಸ್ಥಿತ ಅಪರಾಧ ಕೃತ್ಯದಂತಿದ್ದು, ರಾಜ್ಯ ಸರ್ಕಾರದ ಅಸಹಾಯತೆಯನ್ನು ಮತಾಂಧರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಓಲೈಕೆ, ಮುಸ್ಲಿಮರ ತುಷ್ಟೀಕರಣವು ಮತಾಂಧ ದುರ್ಷರ್ಮಿಗಳಿಗೆ ಸುರಕ್ಷತೆಯ ಅಭಯ ನೀಡಿದಂತಿದ್ದು, ಸಾಮಾನ್ಯ ಮುಸ್ಲಿಮರು ಕೂಡ ಬೇಸತ್ತುಕೊಳ್ಳುವಂತಾಗಿದೆ. ಸಾಂಸ್ಕೃತಿಕ, ಶಾಂತಿಪ್ರಿಯರ ನಗರದಲ್ಲಿ ಮತಾಂಧರ ಅಟ್ಟಹಾಸ ಮೆರೆದಿದ್ದು, ಘಾತುಕರು ಎಲ್ಲೇ ಇದ್ದರೂ ಹುಡುಕಿ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರ ಸತ್ತು ಹೋಗಿದೆ ಎಂದು ಜನರು ಭಾವಿಸುವಂತಾಗುತ್ತದೆ ಎಂದು ಆರ್.ಅಶೋಕ್ ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲವೆ ? ಮುಸ್ಲಿಮರು ಮಾತ್ರ ಯಾಕೆ ಕೆರಳುತ್ತಾರೆ ? ಅಥವಾ ಯಾವುದಾದರೂ ಸಂಘಟನೆ ಪುಂಡಾಟಿಕೆಗೆ ಕುಮ್ಮಕ್ಕು ನೀಡುತ್ತಿದೆಯೆ ? ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ರಾಷ್ಟ್ರೀಯ ನಾಯಕರ ವಿರುದ್ಧ ಕೆಟ್ಟದಾಗಿ ಟೀಕೆ-ಟಿಪ್ಪಣಿ, ವ್ಯಾಖ್ಯಾನ ಮಾಡಿದ ನಿದರ್ಶನಗಳಿವೆ. ಯಾರೋ ಅಪಮಾನ ಮಾಡಿದರು ಎಂದು ಕೆರಳಿ ಪುಂಡಾಟಿಕೆ ಮಾಡಿದವರನ್ನು ಸರ್ಕಾರ ಸುಮ್ಮನೆ ಬಿಡಬಾರದು. ಮುಲಾಜಿಲ್ಲದೆ ಕ್ರಮ ಕೈಗೊಂಡು ಪುಂಡಾಟಿಕೆಗೆ ಅವಕಾಶವಿಲ್ಲ ಎಂಬ ಸ್ಪಷ್ಟ ಎಚ್ಚರಿಕೆ ನೀಡಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.