ನ್ಯೂಸ್

ಸಿದ್ದರಾಮಯ್ಯಗೆ ಹುಡುಕಿ ಕೊಡಲು ಡಿಜಿಪಿಗೆ ಆರ್.ಅಶೋಕ್ ಮನವಿ !

ಬೆಂಗಳೂರು: ರಾಜ್ಯ ಡಿಜಿಪಿಯವರೇ ಸಿದ್ದರಾಮಯ್ಯ ಕಾಣೆಯಾಗಿದ್ದಾರೆ ಎಂದು ಹುಡುಕಿಕೊಡಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮೊರೆಯಿಟ್ಟಿದ್ದಾರೆ !.

ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ನಿರ್ಧಾರವನ್ನು ಉಲ್ಲೇಖಿಸಿ, ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಅಲ್ಲದೆ, ಪ್ರತಿಪಕ್ಷದಲ್ಲಿದ್ದಾಗ ಕಾಂಗ್ರೆಸ್ ಪಕ್ಷವು ಪೆಟ್ರೋಲ್, ಡೀಸೆಲ್ ಏರಿಕೆ ವಿರುದ್ಧ ಹೋರಾಟ ಮಾಡಿದ್ದನ್ನು ಚಿತ್ರಗಳ ಸಹಿತ ನೆನಪಿಸಿ ಅಣಕವಾಡಿದ್ದಾರೆ.

ಸಂದೇಶದಲ್ಲಿ ಇರುವುದೇನು ?

ಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾದರೆ ಜನರಿಗೆ ಸೈಕಲ್, ಎತ್ತಿನಗಾಡಿ, ಟಾಂಗಾ ಸವಾರಿಯೇ ಗತಿ ಎಂದು ಬೈಕ್‌ಗಳ ಶವಯಾತ್ರೆ ನಡೆಸಿದ್ದ ಸಿದ್ದರಾಮಯ್ಯನವರು ಕಾಣೆಯಾಗಿದ್ದಾರೆ, ಡಿಜಿಪಿಯವರೇ ಹುಡುಕಿಕೊಡಿ.

ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾದರೆ ತರಕಾರಿ ಮತ್ತಿತರ ದಿನಬಳಕೆ ವಸ್ತುಗಳ ಬೆಲೆ ಜಾಸ್ತಿ ಆಗುತ್ತದೆ ಎಂದು ಬೊಬ್ಬಿಡುತ್ತಿದ್ದ ಸಿದ್ದರಾಮಯ್ಯನವರು ಕಾಣೆಯಾಗಿದ್ದಾರೆ, ಹುಡುಕಿಕೊಡಿ.

ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಮಾಡುವುದು ಬಡವರನ್ನು ಉಪವಾಸ ಬೀಳಿಸಿ ಸಾಯಿಸುವ ಫ್ಯಾಸಿಸ್ಟ್ ಮನಸ್ಸಿನ ಕ್ರೌರ್ಯ ಎನ್ನುತ್ತಿದ್ದ ಸಿದ್ದರಾಮಯ್ಯನವರು ಕಾಣೆಯಾಗಿದ್ದಾರೆ, ಹುಡುಕಿಕೊಡಿ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಗ್ರಾಹಕರಿಗೆ 25 ರೂಪಾಯಿಗೆ ಪೆಟ್ರೋಲ್ ಹಾಕಿ ಪ್ರತಿಭಟನೆ ನಡೆಸಿದ್ದ ಸಿದ್ದರಾಮಯ್ಯನವರು ಕಾಣೆಯಾಗಿದ್ದಾರೆ, ಹುಡುಕಿಕೊಡಿ.

ಆಷಾಢಭೂತಿತನಕ್ಕೆ, ಬೂಟಾಟಿಕೆಗೆ ಯಾವುದಾದರೂ ನೋಬೆಲ್ ಅಥವಾ ಆಸ್ಕರ್ ಪ್ರಶಸ್ತಿ ಇದ್ದರೆ ಅದು ನಿಶ್ಚಿತವಾಗಿ ಡೋಂಗಿ ಸಿದ್ದರಾಮಯ್ಯನವರಿಗೇ ಸಲ್ಲಬೇಕು ಎಂದಿರುವ ಆರ್.ಅಶೋಕ್, ಸಂದೇಶದ ಅಡಿಯಲ್ಲಿ ‘ಬುರುಡೆ ರಾಮಯ್ಯ’, ‘ಕಾಂಗ್ರೆಸ್ ಲೂಟ್ಸ್ ಕರ್ನಾಟಕ’ ಎಂದು ಟ್ಯಾಗ್ ಮಾಡಿದ್ದಾರೆ.