ಭುವನೇಶ್ವರ್: ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಬ್ಲಾಕ್ಮೇಲರ್ ಅರ್ಚನಾ ನಾಗ್ ಎಂಬಾಕೆಯನ್ನು ಒಡಿಶಾ ಪೊಲೀಸರು ಬಂಧಿಸಿದ್ದು, ಇದೀಗ ಪ್ರತಿದಿನ ಸಾಕಷ್ಟು ಶಾಕಿಂಗ್ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಪೊಲೀಸ್ ಮೂಲಗಳ ಪ್ರಕಾರ. ಅರ್ಚನಾ ನಾಗ್, 2018ರಲ್ಲಿ ಭುವನೇಶ್ವರ್ ಮೂಲದ ಉದ್ಯಮಿಯೊಬ್ಬರಿಂದ 20 ಸಾವಿರ ರೂ. ಹಣವನ್ನು ಮಗನ ಆಸ್ಪತ್ರೆ ಖರ್ಚಿಗೆಂದು ಹೇಳಿ ಸಾಲ ಪಡೆದಿದ್ದಳಂತೆ. ಸ್ವಲ್ಪ ದಿನಗಳ ಬಳಿಕ ಉದ್ಯಮಿ ಹಣವನ್ನು ವಾಪಸ್ ಕೇಳಿದಾಗ, ಹಣ ಕೊಡುವ ಬದಲು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಆತನನ್ನು ಬೆದರಿಸಿದ್ದಾಳಂತೆ. ಇದರಿಂದ ಹೆದರಿದ್ದ ಉದ್ಯಮಿ, ಮರ್ಯಾದೆ ಹೋಗುತ್ತದೆ ಅಂತಾ ಹಣವನ್ನೇ ಕೇಳಲಿಲ್ಲ ಎಂಬುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಆರೋಪಿ ಅರ್ಚನಾ ಸದ್ಯ ಪೊಲೀಸ್ ಬಂಧನದಲ್ಲಿದ್ದು, ಆಕೆಯ ಜಾಮೀನು ಅರ್ಜಿಯನ್ನು ಭುವನೇಶ್ವರದ ಉಪವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತಿರಸ್ಕರಿಸಿದೆ. ಅಧೀನ ನ್ಯಾಯಾಲಯವು ಜಾಮೀನು ನೀಡದಿದ್ದರೆ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವುದಾಗಿ ಅರ್ಚನಾ ಪರ ವಕೀಲ ದೇಬಾಶಿಶ್ ಮೊಹಾಪಾತ್ರ ಶುಕ್ರವಾರ ತಿಳಿಸಿದ್ದಾರೆ.
ಅಂದಹಾಗೆ ಅರ್ಚನಾ ನಾಗ್, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ.
ಅರ್ಚನಾ ಮತ್ತು ಆಕೆಯ ಪತಿ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ, ಅವರ ಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಮೂಲಕ ಬ್ಲಾಕ್ಮೇಲ್ ಮಾಡಿ, ಹಣ ಸುಲಿಗೆ ಮಾಡುತ್ತಿದ್ದರು. ಆದರೆ, ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ. (ಏಜೆನ್ಸೀಸ್)