ನವದೆಹಲಿ: ಭಾರತೀಯ ವಿರೋಧಿ ಪ್ರಚಾರ ಹಾಗೂ ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಎರಡು ವೆಬ್ಸೈಟ್ ಮತ್ತು 20 ಯೂಟ್ಯೂಬ್ ಚಾನೆಲ್ಗಳನ್ನು ಬ್ಲಾಕ್ ಮಾಡಿರುವ ಬೆನ್ನಲ್ಲೇ ಬುಧವಾರ ಮತ್ತೊಮ್ಮೆ ಎಚ್ಚರಿಕೆ ನೀಡಿರುವ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ದೇಶದ ವಿರುದ್ಧ ಷಡ್ಯಂತ್ರ ರೂಪಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದ್ದೇನೆ. ವಿಶ್ವದ ಅನೇಕ ದೇಶಗಳು ಕೂಡ ಗಂಭೀರವಾಗಿ ಪರಿಗಣಿಸಿರುವುದನ್ನು ನೋಡಿ ಖುಷಿಯಾಯಿತು. ಯೂಟ್ಯೂಬ್ ಕೂಡ ಮುಂದೆ ಬಂದು ಸುಳ್ಳು ಸುದ್ದಿ ಹರಡುವವರನ್ನು ಬ್ಲಾಕ್ ಮಾಡುತ್ತಿದೆ ಎಂದು ಮಾಧ್ಯಮಗಳಿಗೆ ಠಾಕೂರ್ ತಿಳಿಸಿದರು.
ಗುಪ್ತಚರ ಏಜೆನ್ಸಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2021ರ ಡಿಸೆಂಬರ್ನಲ್ಲಿ 20 ಯೂಟ್ಯೂಬ್ ಚಾನೆಲ್‌ಗಳು ಮತ್ತು ಎರಡು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಆದೇಶ ನೀಡಿತು. ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡುತ್ತಿದ್ದರಿಂದ ಈ ಕ್ರಮಗಳನ್ನು ಕೈಗೊಂಡಿದೆ.
ಭಾರತದ ವಿರುದ್ಧ ಷಡ್ಯಂತ್ರ ರೂಪಿಸುವ ಯೂಟ್ಯೂಬ್ ಚಾನೆಲ್ಗಳನ್ನು ಭವಿಷ್ಯದಲ್ಲೂ ಕೂಡ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಬ್ಲಾಕ್ ಆಗಿರುವ ಚಾನೆಲ್‌ಗಳು ಕಾಶ್ಮೀರ, ಭಾರತೀಯ ಸೇನೆ, ಭಾರತದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳು, ರಾಮಮಂದಿರ, (ದಿವಂಗತ ಸಿಡಿಎಸ್) ಜನರಲ್ ಬಿಪಿನ್ ರಾವತ್ ಮುಂತಾದ ವಿಷಯಗಳ ಕುರಿತು ದೇಶ ವಿಭಜಿಸುವ ವಿಷಯವನ್ನು ಪ್ರಸಾರ ಮಾಡಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. (ಏಜೆನ್ಸೀಸ್)