ನ್ಯೂಸ್

ಬಿಎಸ್ಸಿ ವಿದ್ಯಾರ್ಥಿನಿ ದುರಂತ ಸಾವು: ಬುಡಕಟ್ಟು ಕಲ್ಯಾಣ ಪದವಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಜನಾಕ್ರೋಶ

ಹೈದರಾಬಾದ್​: ತೆಲಂಗಾಣದ ಕುಮಾರಂ ಭೀಮ್​ ಆಸಿಫಬಾದ್​ ಜಿಲ್ಲೆಯಲ್ಲಿ ಬರುವ ಬುಡಕಟ್ಟು ಕಲ್ಯಾಣ ಪದವಿ ಕಾಲೇಜಿನ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಒಂದೇ ವಾರದಲ್ಲಿ ವರದಿಯಾದ ಮೂರನೇ ಸಾವು ಇದಾಗಿದೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಬುಧವಾರ ಕೊನೆಯುಸಿರೆಳೆದಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು ಲಾಗುಡ್ಯ ಸಂಗೀತಾ ಎಂದು ಗುರುತಿಸಲಾಗಿದೆ. ಸಂಗೀತಾ ಪಾಲಕರು ಪ್ರತಿಭಟನೆಗೆ ಕುಳಿತಿದ್ದು, ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪ ಮಾಡಿದ್ದಾರೆ. ಸಂಗೀತಾಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಂಗೀತಾಳನ್ನು ಕರೀಮ್​ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಡೆಯುತ್ತಿರುವಾಗಲೇ ಆಕೆ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ದಾಖಲಿಸುವಲ್ಲಿ ಕಾಲೇಜು ಮಂಡಳಿಯವರು ವಿಳಂಬ ಮಾಡಿದ್ದು, ಇದೇ ಆಕೆಯ ಸಾವಿಗೆ ಕಾರಣ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಬಹುಜನ ಸಮಾಜ ಪಾರ್ಟಿ ಆಸಿಫಬಾದ್​ ಪೊಲೀಸ್​ ವರಿಷ್ಠಾಧಿಕಾರಿ ಕೆ. ಸುರೇಶ್​ ಕುಮಾರ್​ಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ವಿದ್ಯಾರ್ಥಿನಿಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬಹುಜನ ಸಮಾಜ ಪಾರ್ಟಿ ಆಗ್ರಹಿಸಿದೆ.

ಆಗಸ್ಟ್ 24 ರಂದು ಪೆಂಚಿಕಲ್ ಪೇಟೆ ಮಂಡಲದ ಯಳ್ಳೂರು ಗ್ರಾಮದಲ್ಲಿ ಬುಡಕಟ್ಟು ಕಲ್ಯಾಣ ಇಲಾಖೆ ನಡೆಸುತ್ತಿರುವ ಹಾಸ್ಟೆಲ್‌ನ ನಿವಾಸಿ ಆಲಂ ರಾಜೇಶ್ (15) ಚಿಕಿತ್ಸೆ ಫಲಕಾರಿಯಾಗದೆ ಕಾಘಜ್‌ನಗರದಲ್ಲಿ ಮೃತಪಟ್ಟಿದ್ದರು. ಸಿರ್ಪುರ (ಟಿ) ಮಂಡಲ ಕೇಂದ್ರದ ಸಮಾಜ ಕಲ್ಯಾಣ ವಸತಿ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿನಿ ಗೋಮಾಸ ಅಶ್ವಿನಿ (10) ಆಗಸ್ಟ್ 28 ರಂದು ಕರೀಂನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾಳೆ. ಇದೀಗ ಸಂಗೀತಾ ಸಾವಿಗೀಡಾಗಿದ್ದು, ಒಂದೇ ವಾರದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)