ನ್ಯೂಸ್

ಕಾನ್ಸ್​ಟೇಬಲ್​ ಜತೆ ವಿಷ ಕುಡಿದಿದ್ದ ಮಹಿಳಾ ಎಸ್​ಐ ಸಾವು: ದುರಂತ ಸಾವಿನ ರಹಸ್ಯ ಬಯಲು!

ಗುಂಟೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಚುಂಡೂರು ಠಾಣೆಯ ಸಬ್​ಇನ್ಸ್​ಪೆಕ್ಟರ್ ಶ್ರಾವಣಿ (35) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳಿದಿದ್ದಾರೆ. ​

ರವೀಂದ್ರ ಎಂಬ ಕಾನ್ಸ್​ಟೇಬಲ್​ ಜತೆ ಶ್ರಾವಣಿ ಕಳೆದ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕೈದು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡಿದ ಶ್ರಾವಣಿ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪ್ರಕಾಶಂ ಜಿಲ್ಲೆಯ ಕಂದುಕುರ್​ ಮೂಲದ ಶ್ರಾವಣಿ 2018ರಲ್ಲಿ ಸಬ್​ಇನ್ಸ್​ಪೆಕ್ಟರ್​ ಸ್ಥಾನಕ್ಕೇರಿದರು. ತರಬೇತಿಯ ಬಳಿಕ ನರಸರಾವ್​ಪೇಟೆಯ ದಿಶಾ ಪೊಲೀಸ್​ ಠಾಣೆಗೆ ಮೊದಲ ಪೋಸ್ಟಿಂಗ್​ ಆಯಿತು. ಏಳು ತಿಂಗಳ ಹಿಂದೆ ಶ್ರಾವಣಿ ಚುಂಡೂರು ಠಾಣೆಗೆ ವರ್ಗಾವಣೆ ಆಗಿದ್ದರು.

ಆತ್ಮಹತ್ಯೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಇಬ್ಬರ ನಡುವೆ ವಿವಾಹೇತರ​ ಸಂಬಂಧ ಇತ್ತೆಂದು ಹೇಳಲಾಗಿದೆ. ಇದು ಗೊತ್ತಾಗಿ ರವೀಂದ್ರ ಪತ್ನಿ, ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದಾದ ಬಳಿಕ ರವೀಂದ್ರನನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.

ಈ ಮಧ್ಯೆ ರವೀಂದ್ರ ವಿಷ ಕುಡಿಯುತ್ತಿರುವ ವಿಡಿಯೋವನ್ನು ಎಸ್​ಐ ಶ್ರಾವಣಿಗೆ ಕಳುಹಿಸಿದ್ದ ಎಂದು ತಿಳಿದುಬಂದಿದೆ. ಇದನ್ನು ನೋಡಿ ಶ್ರಾವಣಿ, ರವೀಂದ್ರ ಇದ್ದ ಸ್ಥಳಕ್ಕೆ ತೆರಳಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ತಾಳ್ಮೆ ಕಳೆದುಕೊಂಡ ಶ್ರಾವಣಿ ಸಹ ವಿಷ ಕುಡಿದಿದ್ದಾರೆ ಎನ್ನಲಾಗಿದೆ.

ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಶ್ರಾವಣಿ ಬುಧವಾರ ಬೆಳಗ್ಗೆ ಮೃತಪಟ್ಟರೆ, ರವೀಂದ್ರ ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)