ನ್ಯೂಸ್

ಗರ್ಭಿಣಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಲೋನ್​ ರಿಕವರಿ ಏಜೆಂಟ್​ನಿಂದ ಹತ್ಯೆ ಆರೋಪ: ಮೌನ ಮುರಿದ ಆನಂದ್​ ಮಹೀಂದ್ರಾ

ರಾಂಚಿ: ಹಜಾರಿಬಾಘ್​ನಲ್ಲಿ ಮಹೀಂದ್ರಾ ಲೋನ್​ ರಿಕವರಿ ಏಜೆಂಟ್ ಓರ್ವ ಟ್ರ್ಯಾಕ್ಟರ್​ ಹರಿಸಿ ಗರ್ಭಿಣಿಯೊಬ್ಬರ ಸಾವಿಗೆ ಕಾರಣವಾಗಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಹೀಂದ್ರಾ ಗ್ರೂಪ್​ ಮುಖ್ಯಸ್ಥ ಆನಂದ್​ ಮಹೀಂದ್ರಾ ಅವರು ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.

ಈ ಘಟನೆ ಜಾರ್ಖಂಡ್​ನ ಹಜಾರಿಬಾಘ್​ ಜಿಲ್ಲೆಯಲ್ಲಿ ಸೆ.15ರಂದು ನಡೆದಿದೆ. ಲೋನ್​ ಬಾಕಿ ಉಳಿಸಿಕೊಂಡಿದ್ದಕ್ಕೆ ಕುಟುಂಬದ ಟ್ರ್ಯಾಕ್ಟರ್​ ಅನ್ನು ಮುಟ್ಟುಗೋಲು ಹಾಕೊಂಡಿದ್ದರ ವಿರುದ್ಧ 27 ವರ್ಷದ ಗರ್ಭಿಣಿ ಪ್ರತಿಭಟಿಸುವಾಗ ದುರ್ಘಟನೆ ಸಂಭವಿಸಿದೆ.

ಟ್ರ್ಯಾಕ್ಟರ್​ ಖರೀದಿಸಲು ಮಹಿಳೆಯ ತಂದೆ ಮಹೀಂದ್ರಾ ಫೈನಾನ್ಸ್​ನಿಂದ 1.3 ಲಕ್ಷ ರೂಪಾಯಿ ಹಣ ಸಾಲ ಪಡೆದಿದ್ದರು. ಆದರೆ, ಅದನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಲೋನ್​ ರಿಕವರಿ ಏಜೆಂಟ್​ ಟ್ರ್ಯಾಕ್ಟರ್​ ಅನ್ನು ಮುಟ್ಟುಗೋಲು ಹಾಕಿಕೊಂಡರು. ಮಹಿಳೆಯ ತಂದೆ ಸಾಕಷ್ಟು ಬೇಡಿಕೊಂಡರು ಬಿಡದೇ ಟ್ರ್ಯಾಕ್ಟರ್​ ಸೀಜ್​ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ರೈತನ ಗರ್ಭಿಣಿ ಮಗಳು ಟ್ರ್ಯಾಕ್ಟರ್​ ಮುಟ್ಟುಗೋಲಿನ ವಿರುದ್ಧ ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದರು. ಆದರೆ, ಈ ಸಂದರ್ಭದಲ್ಲಿ ಆಕೆಯ ಟ್ರ್ಯಾಕ್ಟರ್​ ಹರಿದು ದುರಂತವಾಗಿ ಸಾವಿಗೀಡಾದಳು. ಉದ್ದೇಶಪೂರ್ವಕವಾಗಿಯೇ ಟ್ರ್ಯಾಕ್ಟರ್​ ಹರಿಸಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಕಂಪನಿ ತಕ್ಷಣವೇ ಹೇಳಿಕೆ ಬಿಡುಗಡೆ ಮಾಡಿದೆ.

ಹಜಾರಿಬಾಘ್​ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ. ಮಾನವ ದುರಂತವೊಂದು ಸಂಭವಿಸಿದೆ. ನಾವು ಈ ಘಟನೆಯನ್ನು ಎಲ್ಲಾ ಅಂಶಗಳಿಂದ ತನಿಖೆ ಮಾಡುತ್ತೇವೆ. ತನಿಖೆಯ ಸಮಯದಲ್ಲಿ ನಾವು ಅಧಿಕಾರಿಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಈ ದುಃಖದ ಕ್ಷಣದಲ್ಲಿ ನಾವು ಸಂತ್ರಸ್ತ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಮಹೀಂದ್ರಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನೀಶ್ ಶಾ ಪ್ರಕಟಣೆ ಹೊರಡಿಸಿದ್ದಾರೆ.

ಅನೀಶ್ ಶಾ ಅವರ ಪ್ರಕಟಣೆಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಕಂಪನಿಯ ಮುಖ್ಯಸ್ಥ ಆನಂದ್​ ಮಹೀಂದ್ರಾ, ಇದೊಂದು ಭೀಕರ ದುರಂತ. ನಾನು ಅನೀಶ್​ ಅವರ ಹೇಳಿಕೆಯನ್ನು ಬಲವಾಗಿ ಬೆಂಬಲಿಸುತ್ತೇನೆ. ಈ ದುಃಖದ ಸಮಯದಲ್ಲಿ ನಮ್ಮ ಹೃದಯವು ಕುಟುಂಬದ ಪರ ನಿಲ್ಲುತ್ತದೆ ಎಂದು ಗರ್ಭಿಣಿಯ ಸಾವಿಗೆ ಆನಂದ್​ ಮಹೀಂದ್ರಾ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)