ವಿಜಯವಾಡ: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟಿಕ್ಟಾಕ್ ಖ್ಯಾತಿಯ ಫನ್ ಬಕೆಟ್ ಭಾರ್ಗವ ಬಂಧನವಾದ ಬೆನ್ನಲ್ಲೇ ಆತನೊಂದಿಗೆ ಹೆಚ್ಚು ಟಿಕ್ಟಾಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ "ಓ ಮೈ ಗಾಡ್" ಎಂಬ ಡೈಲಾಗ್ನಿಂದಲೇ ಹೆಚ್ಚು ಪರಿಚಿತಳಾಗಿದ್ದ ಟಿಕ್ಟಾಕ್ ಸ್ಟಾರ್ ನಿತ್ಯಾ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
15 ವರ್ಷದ ನಿತ್ಯಾಳನ್ನು ಪ್ರಕರಣದ ಸಂತ್ರಸ್ತೆ ಎಂದು ಸಾಕಷ್ಟು ಮೆಸೇಜ್ಗಳು ಹರಿದಾಡುತ್ತಿರುವ ಬೆನ್ನಲ್ಲೇ ನಿತ್ಯಾ ಈ ಸಂಬಂಧ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭಾರ್ಗವ ಮೇಲಿನ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣ ಮೂಲಕವೇ ನನಗೂ ತಿಳಿಯಿತು. ಆದರೆ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಭಾರ್ಗವ ಬಂಧನ ಆಗಿರುವುದು ನಿಜ. ಆದರೆ, ಪ್ರಕರಣದಲ್ಲಿ ಯಾವುದೇ ವಿಧದಲ್ಲೂ ನನಗೆ ಸಂಬಂಧ ಇಲ್ಲ. ನನ್ನ ಫಾಲೋವರ್ಸ್ ನಿರಂತರವಾಗಿ ಮೆಸೇಜ್ ಮಾಡುತ್ತಿದ್ದಾರೆ. ಏನಾಯಿತು ಎಂದು ಕೇಳುತ್ತಿದ್ದಾರೆ. ಹೀಗಾಗಿ ನಾನು ಸ್ಪಷ್ಟನೆ ನೀಡುತ್ತಿದ್ದೇನೆಂದು ನಿತ್ಯಾ ಹೇಳಿದ್ದಾರೆ.
ಮೀಮ್ಸ್ ಸೃಷ್ಟಿಕರ್ತರು ಮತ್ತು ಯೂಟ್ಯೂಬರ್ಸ್ ಹಾಗೂ ಟ್ರೋಲಿಗರು ನನ್ನ ಹೆಸರನ್ನು ಥಳುಕು ಹಾಕಿದ್ದಾರೆ. ಸತ್ಯ ಏನೆಂದು ತಿಳಿಯದೇ ಈ ರೀತಿ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಮಾಡಿರದಿದ್ದರೆ ಅಂತಹ ವಿಡಿಯೋಗಳನ್ನು ನೀವು ಡಿಲೀಟ್ ಮಾಡುತ್ತೀರಾ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಪ್ರಸ್ತುತ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಮಗದೊಮ್ಮೆ ಸ್ಪಷ್ಟನೆ ನೀಡುತ್ತೇನೆಂದರು.
ಒಂದು ವರ್ಷದಿಂದ ನಾನು ಭಾರ್ಗವನನ್ನು ಸಂಪರ್ಕಿಸಿಲ್ಲ. ಅವನೊಂದಿಗೆ ಶೂಟಿಂಗ್ ಸಹ ಮಾಡಿಲ್ಲ. ನಾನು ಬೇರೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದೇನೆ. ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆಂದು ನಿತ್ಯಾ ತಿಳಿಸಿದರು.
ಈ ಬಗ್ಗೆ ನಿತ್ಯಾ ಅವರ ತಾಯಿಯು ಸಹ ಮಾತನಾಡಿದ್ದು, ಎಲ್ಲರೂ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಸ್ಪಷ್ಟನೆ ನೀಡಲು ವಿಡಿಯೋ ಮಾಡಬೇಕಾಯಿತು. ನಮ್ಮ ಬೆಂಬಲವಾಗಿನ ನಿಂತಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದಾರೆ.
ಪ್ರಕರಣವೇನು?
ಟಿಕ್ಟಾಕ್ ವಿಡಿಯೋ ಹೆಸರಿನಲ್ಲಿ 14 ವರ್ಷದ ಬಾಲಕಿಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆಂಬ ಆರೋಪದ ಮೇಲೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರ್ಗವ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)