ತಿರುವನಂತಪುರಂ: ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಹಳೆಯ ಫೋನ್‌ಗಳನ್ನು ಸೋಮವಾರ ಬೆಳಗ್ಗೆ 10.15ರ ಒಳಗೆ ರಿಜಿಸ್ಟ್ರಾರ್ ಮುಂದೆ ಸಲ್ಲಿಸುವಂತೆ ಖ್ಯಾತ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಲಯಾಳಂ ನಟ ದಿಲೀಪ್ಗೆ ಕೇರಳ ಹೈಕೋರ್ಟ್ ಆದೇಶಿಸಿದೆ. ಇಲ್ಲಿಯವರೆಗೆ ಫೋನ್ ಕೊಡದೇ ಆಟವಾಡಿಸುತ್ತಿದ್ದ ದಿಲೀಪ್ ಕೋರ್ಟ್ ಇದೀಗ ಶಾಕ್ ನೀಡಿದೆ.
ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಕೊಲೆ ಮಾಡಿಸಲು ಸಂಚು ರೂಪಿಸಿದ ಅರೋಪವೂ ಕೂಡ ದಿಲೀಪ್ ಸೇರಿದಂತೆ ಇತರೆ ಐವರು ಆರೋಪಿಗಳ ಮೇಲಿದೆ. ಈ ಬಗ್ಗೆ ಹೊಸ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿ ದಿಲೀಪ್ ಸೇರಿದಂತೆ ಎಲ್ಲ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಹಳೆಯ ಫೋನ್‌ಗಳನ್ನು ಸಲ್ಲಿಸುವಂತೆ ಕೇಳಿದ್ದರು. ಆದರೆ, ಆರೋಪಿಗಳು ಅದನ್ನು ನಿರಾಕರಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ನಿರೀಕ್ಷಣಾ ಜಾಮೀನು ಕೋರಿದ್ದಾರೆ.
ಜಾಮೀನು ಸಂಬಂಧ ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ಈ ವೇಳೆ ತನಿಖಾಧಿಕಾರಿಗಳ ಪರ ವಕೀಲರು ನಟ ದಿಲೀಪ್ ಅವರ ಹಳೆಯ ಫೋನ್‌ಗಳನ್ನು ಹಸ್ತಾಂತರಿಸಲು ಒತ್ತಾಯಿಸಿದರು. ಆದರೆ, ದಿಲೀಪ್ ಹಸ್ತಾಂತರಿಸಲು ನಿರಾಕರಿಸಿದರು. ಅಲ್ಲದೆ, ಒಂದು ವೇಳೆ ಹಸ್ತಾಂತರ ಮಾಡಿದರೆ, ಫೋನ್ನಲ್ಲಿ ಏನಿದೆಯೋ ಅದನ್ನು ಇಟ್ಟುಕೊಂಡು ಸುಳ್ಳು ಕತೆಯನ್ನು ಸೃಷ್ಟಿ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ. ಇದಲ್ಲದೆ, ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತನಿಖಾಧಿಕಾರಿ ಬೈಜು ಪೌಲೋಸ್ ಮತ್ತು ಬಾಲಚಂದ್ರಕುಮಾರ್ ಅವರ ಫೋನ್‌ಗಳನ್ನು ಪರಿಶೀಲಿಸುವಂತೆ ದಿಲೀಪ್ ನ್ಯಾಯಾಲಯವನ್ನು ಒತ್ತಾಯಿಸಿದರು.
ಈಗಾಗಲೇ ದಿಲೀಪ್ ವಿಧಿವಿಜ್ಞಾನ ಪರೀಕ್ಷೆಗಾಗಿ ಹೊಸ ಫೋನ್ನನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ತನಿಖಾಧಿಕಾರಿಗಳ ಪ್ರಕಾರ ಹಳೆಯ ಫೋನ್ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳಿವೆ ಎಂದು ಹೇಳಲಾಗಿದೆ.
ಕೊಲೆಗೆ ಸಂಚು ಪ್ರಕರಣವನ್ನು ದಾಖಲಿಸಿದ ಬೆನ್ನಲ್ಲೇ ದಿಲೀಪ್ ಸೇರಿದಂತೆ ಇತರೆ ಆರೋಪಿಗಳು ತಮ್ಮ ತಮ್ಮ ಫೋನ್‌ಗಳನ್ನು ಬದಲಾಯಿಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಹಳೆಯ ಫೋನ್ ಅಗತ್ಯವನ್ನು ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಮನವರಿ ಮಾಡಿಕೊಟ್ಟಿದ್ದು, ಸೋಮವಾರ ಬೆಳಗ್ಗೆ 10.15ರ ಒಳಗೆ ಫೋನ್‌ಗಳನ್ನು ಸಲ್ಲಿಸುವಂತೆ ಆದೇಶಿಸಿರುವ ನ್ಯಾಯಾಲಯ ಅಲ್ಲಿಯವರೆಗೂ ದಿಲೀಪ್ ಅವರನ್ನು ಬಂಧಿಸಿದಂತೆ ಪೊಲೀಸರಿಗೆ ಸೂಚಿಸಿ, ವಿಚಾರಣೆ ಮುಂದೂಡಿದೆ.
ದೌರ್ಜನ್ಯಕ್ಕೆ ಒಳಗಾದ ನಟಿ ಸಾಮಾನ್ಯ ನಟಿಯೇನಲ್ಲ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಬಹುಭಾಷಾ ನಟಿ. ಐದು ವರ್ಷಗಳ ಹಿಂದೆ ಶೂಟಿಂಗ್ ಮುಗಿಸಿ ಕಾರಿನಲ್ಲಿ ಹಿಂದಿರುಗುವಾಗ ಕಿಡಿಗೇಡಿಗಳ ಗುಂಪೊಂದು ಅವರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ತದನಂತರದಲ್ಲಿ ಮಲಯಾಳಂ ನಟ ದಿಲೀಪ್ರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದು, ಇದೀಗ ಈ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬರುತ್ತಿವೆ. (ಏಜೆನ್ಸೀಸ್)