ಚಂಡೀಗಢ: ಗಣೇಶ ನಿಮಜ್ಜನ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಹರಿಯಾಣದಲ್ಲಿ ಶುಕ್ರವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋನಿಪತ್ನಲ್ಲಿ ಮೂವರು ಮತ್ತು ಮಹೇಂದ್ರಗಢದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಆಗಸ್ಟ್ 31ರಂದು ಆರಂಭವಾದ ಗಣೇಶ ಹಬ್ಬಕ್ಕೆ ಹರಿಯಾಣದಲ್ಲಿ ನಿನ್ನೆ ತೆರೆಬಿದ್ದಿದೆ. ರಾಜ್ಯಾದ್ಯಂತ ಸಾಕಷ್ಟು ಗಣೇಶನ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆಯೊಂದಿಗೆ ನೀರಿನಲ್ಲಿ ಬಿಡಲಾಯಿತು.
ಸೋನಿಪತ್ನ ಮಿಮಾರ್ಪುರ್ ಘಾಟ್ನಲ್ಲಿ ವ್ಯಕ್ತಿಯೊಬ್ಬ ತನ್ನ ಪುತ್ರ ಮತ್ತು ಸೋದರಸಂಬಂಧಿಯೊಂದಿಗೆ ಗಣೇಶ ಮೂರ್ತಿಯನ್ನು ಹಿಡಿದು ನೀರಿನಲ್ಲಿ ಇಳಿದಾಗ ಮೂವರು ಸಹ ನೀರುಪಾಲಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹೇಂದ್ರಗಢದಲ್ಲಿ ಸುಮಾರು 9 ಮಂದಿ ಗಣೇಶ ಮೂರ್ತಿಯನ್ನು ಬಿಡಲು ಝಾಗಡಾಲಿ ಗ್ರಾಮದ ಕನಿನಾ ಮತ್ತು ರೆವಾರಿ ರಸ್ತೆಯ ಪಕ್ಕದಲ್ಲಿರುವ ಕಾಲುವೆಯ ನೀರಿಗೆ ಇಳಿದರು. ಈ ವೇಳೆ ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ 4 ಮಂದಿ ನೀರುಪಾಲಾಗಿದ್ದಾರೆ. ಕಾಲುವೆಯ ನೀರಿನಿಂದ ಎಂಟು ಮಂದಿಯನ್ನು ರಾತ್ರಿಯೇ ಹೊರಗೆಳೆಯಲಾಯಿತು. ಇದರಲ್ಲಿ 4 ಮಂದಿ ಮೃತಪಟ್ಟಿದ್ದಾರೆ.
ಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ನಿಮಜ್ಜನದ ವೇಳೆ ಕಾಲುವೆಯಲ್ಲಿ ಮುಳುಗಿ ಹಲವರು ಅಕಾಲಿಕ ಮರಣ ಹೊಂದಿದ ಸುದ್ದಿ ಹೃದಯ ವಿದ್ರಾವಕವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಮೃತರ ಕುಟುಂಬದವರ ಜೊತೆ ನಾವೆಲ್ಲರೂ ನಿಂತಿದ್ದೇವೆ. NDRF ತಂಡವು ಅನೇಕ ಜನರನ್ನು ಮುಳುಗುವಿಕೆಯಿಂದ ರಕ್ಷಿಸಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ ಎಂದು ಹರಿಯಾಣ ಸಿಎಂ ಎಂ.ಎಲ್. ಖಟ್ಟರ್ ಟ್ವೀಟ್ ಮಾಡಿದ್ದಾರೆ.
ಮಹಾಮಾರಿ ಕರೊನಾ ಸಾಂಕ್ರಾಮಿಕ ಪ್ರೇರಿತ ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷ ಆಚರಣೆಯನ್ನು ಮೊಟಕುಗೊಳಿಸಲಾಗಿತ್ತು. ನಿರ್ಬಂಧಗಳು ಮುಕ್ತವಾಗಿ ಈ ವರ್ಷ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. (ಏಜೆನ್ಸೀಸ್)