ಸಾಂದರ್ಭಿಕ ಚಿತ್ರ 
ನ್ಯೂಸ್

ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ಹಡಗಿನಲ್ಲಿ ಅಗ್ನಿ ಅವಘಡ: 36 ಮಂದಿ ಸಜೀವ ದಹನ, 200 ಜನರ ಸ್ಥಿತಿ ಗಂಭೀರ

ಢಾಕಾ: ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ಹಡಗಿನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 36 ಮಂದಿ ಸಜೀವ ದಹನವಾಗಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಘಟನೆಯನ್ನು ಸುಮಾರು 200 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು (ಡಿ.24) ನಸುಕಿನ ಜಾವ 3 ಗಂಟೆ ಸಮಯದಲ್ಲಿ ಬಾಂಗ್ಲಾದ ಬಾರ್ಗಾನ ಮೂಲದ ಎಂವಿ ಅಭಿಜಾನ್​-10 ಹೆಸರಿನ ಪ್ರಯಾಣಿಕರ ಹಡಗಿನ ಇಂಜಿನ್​ ರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಳಿಕ ಬೆಂಕಿಯ ಜ್ವಾಲೆ ಹೆಚ್ಚಾಗಿ 36 ಮಂದಿಯನ್ನು ಬಲಿ ಪಡೆದುಕೊಂಡಿದೆ. ಹಡಗು ಢಾಕಾದಿಂದ ಪ್ರಯಾಣ ಬೆಳೆಸಿತ್ತು.

ರಾಜಧಾನಿಕ ಢಾಕಾದಿಂದ 250 ಕಿ.ಮೀ ದೂರದಲ್ಲಿರುವ ಜಲಕಥಿಯ ಸುಗಂಧ ನದಿಯಲ್ಲಿ ಘಟನೆ ನಡೆದಿದ್ದು, ಈವರೆಗೆ 36 ಸುಟ್ಟ ದೇಹಗಳನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

200 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅಲ್ಲದೆ, ಹಡಗಿನಲ್ಲಿ ಕಾರ್ಯಾಚರಣೆ ಮುಂದುವರಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)