ನ್ಯೂಸ್

ಟಿಂಬರ್​ ಗೋದಾಮಿನಲ್ಲಿ ಅಗ್ನಿ ದುರಂತ: 11 ಮಂದಿ ಬಿಹಾರ ಕಾರ್ಮಿಕರು ಸಜೀವ ದಹನ

ಹೈದರಾಬಾದ್​: ಟಿಂಬರ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಗಢದಲ್ಲಿ 11 ಮಂದಿ ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಸಿಕಂದರಬಾದ್​ನ ಭೋಯಿಗುಡಾ ಪ್ರದೇಶದಲ್ಲಿ ನಡೆದಿದೆ.

ಧಗಧಗನೇ ಉರಿಯುತ್ತಿರುವ ಬೆಂಕಿಯ ಜ್ವಾಲೆಯನ್ನು ನಂದಿಸಲು ಸ್ಥಳದಲ್ಲಿ ಅನೇಕ ಅಗ್ನಿಶಾಮಕ ವಾಹನಗಳು ಬೀಡುಬಿಟ್ಟಿದ್ದು, ಬೆಂಕಿಯ ಜ್ವಾಲೆ ತಹಬದಿಗೆ ಬಂದಿರುವುದಾಗಿ ತಿಳಿದುಬಂದಿದೆ.

ಪೊಲೀಸ್​ ಮೂಲಗಳ ಪ್ರಕಾರ ಸಿಕಂದರಬಾದ್​ನ ಜನನಿಬಿಡ ಭೋಯಿಗುಡಾ ಗೋದಾಮಿನಲ್ಲಿ ಬಿಹಾರದ 12 ವಲಸೆ ಕಾರ್ಮಿಕರು ಸಿಲುಕಿದ್ದರು. ಎರಡು ಅಂತಸ್ತಿನ ಕಟ್ಟಡದಲ್ಲಿ ಮೊದಲನೇ ಮಹಡಿಯಿಂದ ಜಿಗಿಯುವ ಮೂಲಕ ಓರ್ವ ಕಾರ್ಮಿಕ ಬಚಾವ್​ ಆಗಿದ್ದು, ಉಳಿದ 11 ಮಂದಿ ಸಜೀವ ದಹನವಾಗಿದ್ದಾರೆ.

ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯಲ್ಲಿ ಮೃತಪಟ್ಟ ಕಾರ್ಮಿಕರ ಕೊನೆಯ ಅವಶೇಷಗಳನ್ನು ಬಿಹಾರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್​)