ಶಿಮ್ಲಾ: ಪ್ರವಾಸಿ ತಾಣಗಳ ರಾಜ್ಯವಾಗಿರುವ ಹಿಮಾಚಲ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪಗಳ ಸರಣಿ ಮುಂದುವರಿದಿದೆ. ಜುಲೈ 25ರ ಭಾನುವಾರದಂದು ಗುಡ್ಡದ ಮೇಲ್ಭಾಗದಲ್ಲಿದ್ದ ಕಲ್ಲು ಬಂಡೆಗಳು ಕುಸಿದುಬಿದ್ದಿದ್ದು, 9 ಪ್ರವಾಸಿಗರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಘನ ಘೋರ ದುರಂತಕ್ಕೆ ಹಿಮಾಚಲ ಪ್ರದೇಶ ಸಾಕ್ಷಿಯಾಗಿದೆ.
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ (ಆಗಸ್ಟ್ 11) ಸಂಭವಿಸಿದ ಭೂಕುಸಿತದಲ್ಲಿ 11 ಮಂದಿ ದಾರುಣವಾಗಿ ಮೃತಪಟ್ಟಿದ್ದು, 30 ಮಂದಿ ಕಾಣೆಯಾಗಿದ್ದಾರೆ. ಅನೇಕ ವಾಹನಗಳು ಭೂಕುಸಿತದ ಅವೇಶಗಳ ಅಡಿಯಲ್ಲಿ ಸಿಲುಕಿವೆ. ಭೂಕುಸಿತ ಅವೇಶಷಗಳಡಿ ಒಂದು ರಾಜ್ಯ ಸರ್ಕಾರಿ ಸಾರಿಗೆ ಬಸ್, ಒಂದು ಟ್ರಕ್ ಹಾಗೂ ಕೆಲವು ಕಾರುಗಳು ರಸ್ತೆ ನಡುವೆಯೇ ಸಿಲುಕಿಕೊಂಡಿದ್ದು, ರೆಕಾಂಗ್ ಪಿಯೋ ಶಿಮ್ಲಾ ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿದೆ. ಶಿಮ್ಲಾಗೆ ತೆರಳುತ್ತಿದ್ದ ಬಸ್ನಲ್ಲಿ 40 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಸುಮಾರು 25-30 ಜನರು ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದಾರೆಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅದರಲ್ಲಿ ಹತ್ತು ಜನರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆದ್ದಾರಿಯಲ್ಲಿ ವಾಹನಗಳ ಮೇಲೆ ಡಿಕ್ಕಿ ಹೊಡೆಯುವ ಮೊದಲು ಕಲ್ಲುಬಂಡೆಗಳು ಭಾರೀ ಶಬ್ದದೊಂದಿಗೆ ಗುಡ್ಡದ ಕೆಳಗೆ ಉರುಳುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸರೆಯಾಗಿದ್ದು, ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಸ್ಥಳದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ನ ಸುಮಾರು 200 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಪೊಲೀಸ್ ಮತ್ತು ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆ. ಒಂದು ಬಸ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿರಬಹುದು ಎಂದು ನಮಗೆ ಮಾಹಿತಿ ಸಿಕ್ಕಿದೆ. ನಾವು ವಿವರವಾದ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಠಾಕೂರ್ ಅವರೊಂದಿಗೆ ಮಾತನಾಡಿದ್ದು, ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ.
ಈ ಋತುವಿನಲ್ಲಿ ಅನೇಕ ಭೂಕುಸಿತಗಳು ಮತ್ತು ದಿಢೀರ್ ಪ್ರವಾಹಗಳಂತಹ ಹಲವು ವಿಡಿಯೋಗಳು ಹಿಮಾಚಲ ಪ್ರದೇಶದಿಂದ ಹೊರಹೊಮ್ಮಿವೆ. ನಿರಂತರ ಪ್ರಾಕೃತಿಕ ವಿಕೋಪದಿಂದ ಹಿಮಾಚಲ ಪ್ರದೇಶದಲ್ಲಿ ಆತಂಕದ ವಾತಾವರಣೆ ಮನೆ ಮಾಡಿದೆ. (ಏಜೆನ್ಸೀಸ್)