ನವದೆಹಲಿ: ದೇಶಾದ್ಯಂತ ಹಿಂದೂ ದೇವಾಲಯಗಳ ಅವಶೇಷ ಪತ್ತೆಯಾದ ಜಾಗದಲ್ಲಿ ಪೂಜೆಗೆ ಅವಕಾಶ ನೀಡಬೇಕೆಂಬ ಹಿಂದೂಪರ ಸಂಘಟನೆಗಳ ಕೂಗು ಕೇಳಿಬಂದಿದ್ದು, ಈ ಹಿನ್ನಲೆಯಲ್ಲಿ ಕೆಲವೊಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿದೆ.
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಶಿವಲಿಂಗ ಪತ್ತೆಯಾದ ಬೆನ್ನಲ್ಲೇ ಕುತಬ್ ಮಿನಾರ್ನಲ್ಲೂ ಹಿಂದೂ ದೇವಾಲಯಗಳ ಕುರುಹು ಇರುವುದನ್ನು ಪ್ರಶ್ನಿಸಿ ಪೂಜೆ ಅವಕಾಶ ಕೋರಿ ಹಿಂದೂ ಪರ ಸಂಘಟನೆಯಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ದಿಲ್ಲಿಯ ಸಾಕೇತ್ ಕೋರ್ಟ್, ಈ ಬಗ್ಗೆ ಉತ್ತರಿಸಿ ವರದಿ ಸಲ್ಲಿಸುವಂತೆ ಪುರಾತತ್ವ ಇಲಾಖೆ ಸೂಚಿಸಿತ್ತು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಕುತುಬ್ ಮಿನಾರ್ ಸ್ಮಾರಕ ಇಲ್ಲಿ ಯಾವುದೇ ಪೂಜೆ ನಡೆಯುವ ಹಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
1914ರಿಂದಲೇ ಕುತುಬ್ ಮಿನಾರ್ಅನ್ನು ಸಂರಕ್ಷಿತ ಸ್ಮಾರಕ ಎಂದೇ ಘೋಷಿಸಲಾಗಿದೆ. ಹಾಗಾಗಿ ಇದನ್ನು ಈಗ ಬದಲಾಯಿಸಲು ಸಾಧ್ಯವಿಲ್ಲ. ಅಲ್ಲದೇ ಸ್ಮಾರಕದಲ್ಲಿ ಪೂಜೆಗೆ ಅವಕಾಶ ಕೊಡುವ ಹಾಗೂ ಇಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದೆ.
ಸದ್ಯ ಇದು ಕಾನೂನಿನಲ್ಲೂ ಇಲ್ಲ. ಸ್ಮಾರಕಗಳನ್ನು ಕಿತ್ತು ಬದಲಾಯಿಸುವ ಯಾವುದೇ ಕಾನೂನು ಸದ್ಯಕ್ಕಿಲ್ಲ. ಹಾಗಾಗಿ ಇದನ್ನು ಹಾಗೇ ಉಳಿಸಿಕೊಳ್ಳುವುದು ಸರಿ ಎಂದು ಪುರಾತತ್ವ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಹೇಳಿದೆ. (ಏಜೆನ್ಸೀಸ್)