ನ್ಯೂಸ್

ಬಮುಲ್ ಚುನಾವಣೆಗೆ ಸದ್ದಿಲ್ಲದೆ ಸಿದ್ಧತೆ

* ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತರೇ ಹಾಲಿ ನಿರ್ದೇಶಕರು

* ಯಾರ‌್ಯಾರಿಗೆ ಟಿಕೆಟ್ ತಪ್ಪಲಿದೆ ಎನ್ನುವುದೇ ನಿಗೂಢ

ಗಂಗಾಧರ್ ಬೈರಾಪಟ್ಟಣ ರಾಮನಗರ

ಲೋಕಸಭೆ ಚುಣಾವಣೆ ನಂತರ ಈಗ ಜಿಲ್ಲೆಯಲ್ಲಿ ಬಮುಲ್ ಚುನಾವಣೆಗೆ ಸದ್ದಿಲ್ಲದೆ ಸಿದ್ಧತೆಗಳು ನಡೆದಿದ್ದು, ಆಡಳಿತಾರೂಢ ಕಾಂಗ್ರೆಸ್‌ನ ಬೆಂಬಲಿತರೇ ಬಹುತೇಕ ಹಾಲಿ ನಿರ್ದೇಶಕರಾಗಿರುವ ಕಾರಣ ಇವರಲ್ಲಿ ಯಾರ‌್ಯಾರಿಗೆ ಟಿಕೆಟ್ ತಪ್ಪಲಿದೆ ಎನ್ನುವ ಕುತೂಹಲ ಕ್ಷೇತ್ರದಲ್ಲಿ ಮೂಡಿದೆ.

ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಕುದೂರು, ಹಾರೋಹಳ್ಳಿ ತಾಲೂಕು ಒಳಗೊಂಡ ಬೆಂಗಳೂರು ದಕ್ಷಿಣ ಕ್ಷೇತ್ರಗಳು ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಬಮುಲ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿ ಆಗಿತ್ತಾದರೂ ಚುನಾವಣಾ ಆಯೋಗ ಲೋಕಸಭೆಗೆ ವೇಳಾಪಟ್ಟಿ ಪ್ರಕಟಣೆ ಮಾಡಿದ್ದರಿಂದ ಚುನಾವಣೆ ಮುಂದೂಡಲಾಗಿತ್ತು.

ಈಗ ಲೋಕಸಭೆ ಫಲಿತಾಂಶ ಪ್ರಕಟಗೊಂಡ ಬಳಿಕ ಹೊಸ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದ್ದು, ಈ ನಡುವೆ ನಿರ್ದೇಶಕ ಸ್ಥಾನ ಗೆಲ್ಲಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಯಾರ‌್ಯಾರು ಆಕಾಂಕ್ಷಿಗಳು?

ಜಿಲ್ಲೆಯ ಮಟ್ಟಿಗೆ ಹಲವರು ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ರಾಮನಗರ ನಿರ್ದೇಶಕ ಸ್ಥಾನಕ್ಕೆ ಹಾಲಿ ನಿರ್ದೇಶಕ ಪಿ.ನಾಗರಾಜು ಕಾಂಗ್ರೆಸ್ ಬೆಂಬಲಿತರಾಗಿದ್ದರೆ ಪ್ರತಿಸ್ಪರ್ಧಿಯಾಗಿ ಕಲ್ಲುಗೋಪಳ್ಳಿಯ ಕೆಂಪಣ್ಣ ಅವರ ಪತ್ನಿ ರೇಣುಕಮ್ಮ ಜೆಡಿಎಸ್ ಅಭ್ಯರ್ಥಿ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನು, ಚನ್ನಪಟ್ಟಣದಲ್ಲಿ ಹಾಲಿ ನಿರ್ದೇಶಕ ಜೆಡಿಎಸ್‌ನ ಎಚ್.ಸಿ.ಜಯಮುತ್ತು ಮತ್ತೊಮ್ಮೆ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಇವರಿಗೆ ಪ್ರತಿಬಾರಿ ಸ್ಪರ್ಧೆವೊಡ್ಡುತ್ತಿದ್ದ ಮಾಜಿ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಸಹ ಸ್ಪರ್ಧೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಮಾಗಡಿಯಲ್ಲಿ ಎರಡು ಕ್ಷೇತ್ರಗಳಿದ್ದು, ಹಾಲಿ ನಿರ್ದೇಶಕರು, ಕಣದಿಂದ ಹಿಂದೆ ಸರಿಯುವುದಾಗಿ ಹೇಳಿರುವುದು ಶಾಸಕ ಬಾಲಕೃಷ್ಣ ಅವರ ಸಹೋದರ ಎಚ್.ಎನ್.ಅಶೋಕ್ ಹಾದಿ ಸುಗಮವಾಗಿಸಿದೆ. ಅಶೋಕ್‌ಗೆ ಜೆಡಿಎಸ್‌ನ ಬೋರ್‌ವೆಲ್ ನರಸಿಂಹಯ್ಯ ಸ್ಪರ್ಧೆವೊಡ್ಡುವ ಸಾಧ್ಯತೆಯಿದ್ದು, ಕುದೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಕೆಇಬಿ ರಾಜಣ್ಣ ಮತ್ತೆ ಕಣಕ್ಕಿಳಿದರೆ ಪ್ರತಿಸ್ಪರ್ಧಿಯಾಗಿ ಕನ್ನಸಂದ್ರ ಮಂಜುನಾಥ್ ಇಲ್ಲ ಬೇರಾರಿಗಾದರೂ ಟಿಕೆಟ್ ನೀಡಬಹುದು. ಕನಕಪುರದಲ್ಲಿ ರಾಜ್ ಕುಮಾರ್ ಮತ್ತು ಬೆಂಗಳೂರು ದಕ್ಷಿಣದಲ್ಲಿ ಹರೀಶ್ ಕುಮಾರ್ ಮತ್ತೊಮ್ಮೆ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆಯಾದರೂ, ಅಂತಿಮ ಕ್ಷಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಣತಿಯಂತೆ ಅಭ್ಯರ್ಥಿಗಳು ಬದಲಾದರೂ ಅಚ್ಚರಿ ಇಲ್ಲ. ಈ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಇನ್ನೂ ಸಿದ್ಧತೆಯಲ್ಲಿ ತೊಡಗಿಕೊಂಡಂತೆ ಕಾಣುತ್ತಿಲ್ಲ.

ಪಕ್ಷಗಳಿಗೆ ನಿರಾಳ

ಕಳೆದ ಬಾರಿ ಟಿಕೆಟ್ ಹಂಚಿಕೆ ಪಕ್ಷದ ನಾಯಕರ ಪಾಲಿಗೆ ಸವಾಲಿನ ಕೆಲಸವಾಗಿತ್ತು. ಆದರೆ ಈ ಭಾರಿ ಅಂತಹ ತಲೆ ಬಿಸಿ ಪಕ್ಷದ ನಾಯಕರಿಗೆ ಕಂಡು ಬಂದಿಲ್ಲ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಅಸಮಾಧಾನಿತರನ್ನು ಸಮಾಧಾನ ಪಡಿಸುವ ಪರಿಸ್ಥಿತಿ ಎದುರಾಗುವುದು ತೀರಾ ವಿರಳ.

ಎದುರಾಳಿ ಮಣಿಸಲು ತಂತ್ರ

ರಾಮನಗರದಲ್ಲಿ ಬಮುಲ್ ನಿರ್ದೇಶಕರಾಗಿ ಸತತ ಆಯ್ಕೆಯಾಗುತ್ತಿರುವ ಪಿ.ನಾಗರಾಜು ಅವರನ್ನು ಈ ಬಾರಿ ಮಣಿಸಲೇಬೇಕು ಎನ್ನುವ ಪ್ರಯತ್ನ ನಡೆದಿದೆ. ಎಂಪಿಸಿಎಸ್‌ನಲ್ಲಿ ಪ್ರಭಾವ ಮತ್ತು ಹಿಡಿತ ಸಾಧಿಸಿರುವ ಪಿ.ನಾಗರಾಜು ರಾಜಕೀಯದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದು, ಈ ಬಾರಿಯೂ ಗೆಲುವು ನಮ್ಮದೇ ಎನ್ನುತ್ತಿದ್ದಾರೆ. ಆದರೆ, ಈ ಬಾರಿ ಬಿಡದಿ ರೇಣುಕಮ್ಮ ಅವರನ್ನು ಕಣಕ್ಕೆ ಇಳಿಸುವ ಮೂಲಕ ಪಿ.ನಾಗರಾಜು ಅವರನ್ನು ಕಟ್ಟಿಹಾಕುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆ.

ಅರ್ಹ ಸದಸ್ಯರು

ಜಿಲ್ಲೆಯಲ್ಲಿ ಒಟ್ಟು 966 ಎಂಪಿಸಿಎಸ್‌ಗಳಿದ್ದು, ಇವುಗಳಲ್ಲಿ 888 ಸಂಘಗಳು ಮತಚಲಾವಣೆಯ ಅರ್ಹತೆ ಹೊಂದಿವೆ. ಈಗಾಗಲೇ ಈ ಸಂಬಂಧ ಬಮುಲ್ ಕರಡು ಮತದಾರರ ಮಟ್ಟಿಯನ್ನೂ ಬಿಡುಗಡೆ ಮಾಡಿದೆ. ಆಯಾ ಎಂಪಿಸಿಎಸ್ ಅಧ್ಯಕ್ಷರು ಸಂಘದ ಪರವಾಗಿ ಮತ ಹಾಕುವ ಹಕ್ಕನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ತಮ್ಮತಮ್ಮ ಗೆಲುವಿಗೆ ಬೇಕಾದ ಡೇರಿಗಳಲ್ಲಿ ಬೆಂಬಲಿತರಿಗೆ ಅಧಿಕಾರ ಕೊಡಿಸುವುದರಲ್ಲಿ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳು ನಿರತರಾಗಿದ್ದಾರೆ.

ಕ್ಷೇತ್ರ      ಸದಸ್ಯರ ಸಂಖ್ಯೆ    ಅರ್ಹ ಸದಸ್ಯರು

ಮಾಗಡಿ     148                138

ರಾಮನಗರ 168                 148

ಹಾರೋಹಳ್ಳಿ   139             135

ಕನಕಪುರ      178             163

ಕುದೂರು       155            150

ಚನ್ನಪಟ್ಟಣ     178            154

ಒಟ್ಟು          966            888