ಕೋಲಾರ: ಜೆಜೆಎಂ ಬಗ್ಗೆ ಜನರಲ್ಲಿರುವ ತಪು$್ಪ ಕಲ್ಪನೆ ಹೋಗಲಾಡಿಸಲು ಮನೆ ಮನೆಗೆ ತ್ವರಿತವಾಗಿ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮವಹಿಸಬೇಕು ಎಂದು ವಿಶ್ವ ಬ್ಯಾಂಕ್ ಪ್ರತಿನಿಧಿ ಕುಳ್ಳಪ್ಪ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಲ ಜೀವನ್ ಮಿಷನ್ (ಜೆಜೆಎಂ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆ ಅನುಷ್ಠಾನದಿಂದ ನೀರಿನ ಸಮಸ್ಯೆ ನಿವಾರಣೆ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಯೋಜನೆಗೆ ವಿಶ್ವ ಬ್ಯಾಂಕ್ ಸಹಕಾರ ನೀಡುತ್ತಿದ್ದು, ರಾಜ್ಯಕ್ಕೆ 70,000 ಕೋಟಿ ರೂ. ಒದಗಿಸಿದೆ. ಸಮರ್ಪಕವಾಗಿ ಯೋಜನೆ ಜಾರಿಗೆ ತಂದು ಉದ್ದೇಶ ಈಡೇರಿಸಬೇಕು. ಸುಸ್ಥಿರವಾಗಿ ನೀರು ಪೂರೈಸಲು ಮುಖ್ಯ ಉದ್ದೇಶವಾಗಿದೆ. ಇದು ಮುಂದಿನ 30 ವರ್ಷ ಸಮಸ್ಯೆ ನಿವಾರಿಸಬಹುದು. ಕುಡಿಯುವ ನೀರು ಪೂರೈಕೆ ಮಾಡುವುದು ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ, ಸಮುದಾಯದ ಜವಾಬ್ದಾರಿ ಎಂದರು.
ಓವರ್ ಹೆಡ್ ಟ್ಯಾಂಕನ್ನು ಪರಿಶೀಲಿಸಿ ಸ್ವಚ್ಛತೆಗೊಳಿಸಬೇಕು, ನೀರು ಶೇಖರಣೆಯಿಂದ ಎದುರಾಗುವ ಪರಿಣಾಮ ಬಗ್ಗೆ ಜಾಗೃತಿ ಮೂಡಿಸಬೇಕು. ಮೀಟರ್ ಮಾಹಿತಿ ಪುಸ್ತಕ ನಿರ್ವಹಣೆ ಮಾಡಬೇಕು. 154 ಪಂಚಾಯಿತಿಗಳಲ್ಲೂ ಇದು ಕಾರ್ಯಗತಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ರಮೇಶ್, ಇಇ ರು ಉಪಸ್ಥಿತರಿದ್ದರು.
* ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿ
ಡೆನ್ಮಾರ್ಕ್ ಪ್ರತಿನಿಧಿ ಕ್ರಿಸ್ಟೋಫರ್ ಮಾತನಾಡಿ, ಜೆಜೆಎಂ ಯೋಜನೆಯ ಗ್ರಾಮೀಣ ಭಾಗದ ಜನತೆಗೆ ವರದಾನವಾಗಿದೆ. ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂಜಿನಿಯರ್ಗಳು, ಪಿಡಿಒಗಳು ಸಮನ್ವಯದಿಂದ ಕೆಲಸ ಮಾಡಿದರೆ ಉದ್ದೇಶ ಈಡೇರಲು ಸಾಧ್ಯ ಎಂದು ತಿಳಿಸಿದರು.
ಮೀಟರ್ ಅಳವಡಿಕೆಯಿಂದ ಜನ ಹೆದರಬಹುದು, ಇದರಿಂದ ಹೊರೆ ಬೀಳುವುದಿಲ್ಲ ಎಂಬ ಅರಿವು ಮೂಡಿಸಬೇಕು. 24 ತಾಸು ಸರಬರಾಜು ಮಾಡುವುದು ತಾಂತ್ರಿಕ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.
* ಬಹುಪಯೋಗಿ ಸಂಪರ್ಕ ಬಂದ್ ಮಾಡಿ
ಗ್ರಾಮೀಣ ಕುಡಿಯುವ ನೀರು ಸಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿ ಖಾಫರ್ ಸುತಾರ್ ಮಾತನಾಡಿ, ರಾಜ್ಯದಲ್ಲಿ ಕೋಲಾರ ಜಿಲ್ಲೆಯು ಯೋಜನೆ ಅನುಷ್ಠಾನದಲ್ಲಿ ಮಾದರಿಯಾಗಿದೆ. ನಾಲ್ಕನೇ ಹಂತದಲ್ಲಿ ಯೋಜನೆ ಜಾರಿಯಲ್ಲಿದ್ದು, ಹಿಂದಿನ ಜಿಲ್ಲೆಗಳಲ್ಲಿ ಆಗಿರುವ ತಪ್ಪುಗಳು ಇಲ್ಲಿ ಆಗುವುದು ಬೇಡ. ಬಹುಪಯೋಗಿ ಸಂಪರ್ಕ ಬಂದ್ ಮಾಡಬೇಕು ಎಂದು ತಿಳಿಸಿದರು.
* ಕಾಮಗಾರಿಗೆ ವೇಗ
ಸಿಇಒ ಡಾ.ಪ್ರವಿಣ್ ಪಿ.ಬಾಗೇವಾಡಿ ಮಾತನಾಡಿ, ಆರಂಭದಲ್ಲಿ ಜೆಜೆಎಂ ಕೆಲಸದ ಬಗ್ಗೆ ದೂರುಗಳು ವ್ಯಾಪಕವಾಗಿ ಬಂದಿದ್ದವು. ಸ್ಥಳಕ್ಕೆ ಭೇಟಿ ನೀಡಿ, ಇಂಜಿನಿಯರ್ಗಳ ಬೆನ್ನತ್ತಿ ಕೆಲಸಕ್ಕೆ ವೇಗ ನೀಡಲಾಗಿದೆ. ರಸ್ತೆ ಹಗೆದು ಬಿಟ್ಟಿದ್ದನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡಿಸಲಾಗಿದೆ. ಯೋಜನೆ ಕುರಿತು ಪ್ರತಿವಾರ ಪರಿಶೀಲನೆ ನಡೆಸಲಾಗುತ್ತಿದೆ. ಮುಂದಿನ ಡಿಸೆಂಬರ್ ಒಳಗೆ ಎಲ್ಲೆಡೆ ದಿನದ 24 ತಾಸು ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
* ದೂರುಗಳು ಕಡಿಮೆ
ಪಿಡಿಒ ಸತೀಶ್ ಮಾತನಾಡಿ, ಒಂದು ವರ್ಷದಿಂದ ದಿನ 24 ತಾಸು ನೀರು ಪೂರೈಕೆ ಮಾಡುತ್ತಿರುವುದರಿಂದ ದೂರುಗಳು ಬರುವುದು ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ರೈತರು ನೀರಿಗಾಗಿ ಕಾಯುವಂತಿಲ್ಲ ಎಂದು ತಿಳಿಸಿದರು.