ನ್ಯೂಸ್

ಕೊಳೆಗೇರಿ ನಿವಾಸಿಗಳಿಗೆ ಸೂರು ಕಲ್ಪಿಸುವ ಯೋಜನೆಗೆ ಚುರುಕು

manjunatha

ಬೆಂಗಳೂರು: ರಾಜ್ಯದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಶಾಶ್ವತ ಸೂರು ಕಲ್ಪಿಸುವ ಯೋಜನೆಗೆ ಚುರುಕು ನೀಡಲಾಗಿದ್ದು, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಜಡತ್ವ ನಿವಾರಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮಂಡಳಿ 1.84 ಲಕ್ಷ ಮನೆ ನಿರ್ವಿುಸುವ ಗುರಿ ಹೊಂದಿದ್ದು, ಇದರಲ್ಲಿ 49,000 ಮನೆ ನಿರ್ವಣಕ್ಕೆ ಕೆಲ ವರ್ಷಗಳ ಹಿಂದೆಯೇ ಟೆಂಡರ್ ಕರೆದು ಗುತ್ತಿಗೆ ನೀಡಿದೆ. ಈ ಪೈಕಿ 10,000 ಮನೆಗಳ ಕಾಮಗಾರಿಯಷ್ಟೇ ಪ್ರಾರಂಭವಾಗಿದೆ. ಉಳಿದ 39,000 ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗದ ಕಾರಣ ಗುತ್ತಿಗೆ ರದ್ದುಪಡಿಸಲಾಗಿದೆ. ಫಲಾನುಭವಿಗಳ ಆಯ್ಕೆಯಿಂದ ಗುತ್ತಿಗೆ, ಕಾಮಗಾರಿ ಗುಣಮಟ್ಟ, ಅರ್ಹರ ವಾಸ ಪ್ರತಿಯೊಂದನ್ನೂ ಪಾರದರ್ಶಕವಾಗಿ ನಿರ್ವಹಿಸಲು ಅಧಿಕಾರಿಗಳ ವಿಶೇಷ ತಂಡ ರಚನೆಯಾಗಿದೆ. ವಸತಿ ಪಡೆದವರು ಬಾಡಿಗೆ ನೀಡಿದ್ದಾರೆ ಎಂಬ ದೂರುಗಳ ತನಿಖೆಗೂ ತಂಡ ನೇಮಕವಾಗಿದೆ ಎಂದು ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ವಸತಿ ಯೋಜನೆಯಡಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರಿನಲ್ಲೇ 50,000 ಮನೆ ನಿರ್ವಿುಸುತ್ತಿದೆ. ರಾಜ್ಯದ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ವಸತಿ ಫಲಾನುಭವಿಗಳ ಕಂತಿನಲ್ಲಿ ಶೇ.10 ಪಾಲಿಕೆ ಭರಿಸಲು ಒಪ್ಪಿದೆ ಎಂದರು.

ಅಗ್ಗದ ಬಡ್ಡಿಯಲ್ಲಿ ಸಾಲ: ಎಲ್ಲ ವರ್ಗದ ಬಡವರೂ ಕೊಳಚೆ ಪ್ರದೇಶದಲ್ಲಿ ನೆಲೆಸಿದ್ದಾರೆ. ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ತಮ್ಮ ಪಾಲಿನ ಕಂತು ಗರಿಷ್ಠ 1 ಲಕ್ಷ ರೂ. ಕಟ್ಟಬೇಕು. ಅನುಕೂಲವಾಗುವಂತೆ ಆಯ್ದ ಬ್ಯಾಂಕ್​ಗಳಿಂದ ಅಗ್ಗದ ಬಡ್ಡಿ ದರದಲ್ಲಿ ಸಾಲ ಕೊಡಿಸಲು ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಉಡುಪಿ, ಗದಗ, ಬಳ್ಳಾರಿ, ಬಾಗಲಕೋಟೆಯಲ್ಲಿ ಈ ವ್ಯವಸ್ಥೆಯಾಗಿದ್ದು, ಮಂಗಳೂರಿನಲ್ಲೂ ಇದೇ ಕ್ರಮಕೈಗೊಳ್ಳಲಾಗುವುದು. ಕೊಳೆಗೇರಿಯಲ್ಲಿ ನೆಲಮಹಡಿ ಜತೆಗೆ 2 ಅಥವಾ 3 ಮಹಡಿ ನಿರ್ವಣವಾಗಲಿದೆ. ಎರಡು ವರ್ಷದೊಳಗೆ ಶೇ.80 ಕೊಳೆಗೇರಿ ರಹಿತ ರಾಜ್ಯ ಮಾಡಲಾಗುವುದು ಎಂದರು.

‘ವಸತಿ’ಗೆ ಒಡತಿ: ವಸತಿ ಯೋಜನೆಯಡಿ ನಿರ್ವಿುಸುವ ಮನೆಗಳನ್ನು ಮಹಿಳೆ ಹೆಸರಿನಲ್ಲಿ ನೋಂದಣಿ ಮಾಡಲಾಗುವುದು. ‘ವಸತಿ’ಗೆ ಒಡತಿ ಆಗುವುದರಿಂದ ಯಜಮಾನ ವಿವಿಧ ಕಾರಣಗಳಿಗೆ ಮನೆ ಪರಭಾರೆ ಮಾಡುವುದು ತಪು್ಪತ್ತದೆ ಎಂದು ವಿ.ಸೋಮಣ್ಣ ಹೇಳಿದರು.

ಗುತ್ತಿಗೆ ಮಿತಿ: ವಸತಿ ಯೋಜನೆಯಡಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಒಬ್ಬರಿಗೆ 500 ಮನೆ ನಿರ್ವಣದ ಗುತ್ತಿಗೆ ಮಿತಿ ನಿಗದಿ ಪಡಿಸಲಾಗಿದೆ. ಮನೆಗಳ ಸಂಖ್ಯೆ 700ಕ್ಕೂ ಹೆಚ್ಚಾದರೆ ವಿಶೇಷ ಪ್ರಕರಣವೆಂದು ಪರಿಗಣಿಸಿ 2 ಕ್ಷೇತ್ರ ವ್ಯಾಪ್ತಿಗೆ ವಿಂಗಡಿಸುವುದಾಗಿ ಸಚಿವರು ತಿಳಿಸಿದರು.

‘ಸಿಎಂ ಮನೆ’ಗೆ ಶೀಘ್ರ ಚಾಲನೆ

ಬೆಂಗಳೂರಿನ ‘ಮುಖ್ಯಮಂತ್ರಿ ಒಂದು ಲಕ್ಷ ಮನೆ ನಿರ್ವಿುಸುವ ಬಹುಮಹಡಿ ವಸತಿ ಯೋಜನೆ’ ಅಡಿ 6,000 ಮನೆ ನಿರ್ವಣಕ್ಕೆಫೆಬ್ರವರಿಯಲ್ಲಿ ಶಿಲಾನ್ಯಾಸ ನೆರವೇರಲಿದೆ. ಕ್ರಿಯಾ ಯೋಜನೆಯಂತೆ 46,000 ಮನೆ ನಿರ್ವಿುಸಲಾಗುತ್ತದೆ. ಬಾಕಿ 54,000 ಮನೆಗಳ ಬಗ್ಗೆ ನಂತರ ಯೋಚಿಸಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು. ಈ ಯೋಜನೆಯಡಿ ನೆಲಮಹಡಿ ಹಾಗೂ 3 ಅಂತಸ್ತುಗಳ ( ಜಿ ಪ್ಲಸ್ 3) ನಿರ್ವಣಕ್ಕೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಕೇಂದ್ರ ಸರ್ಕಾರ ಜಿ ಪ್ಲಸ್ 3ಗೆ ಅನುಮತಿ ನೀಡಿದ್ದರೂ ಹಿಂದಿನ ಸರ್ಕಾರ ಜಿ ಪ್ಲಸ್ 14 ಮಹಡಿಗೆ ನಿರ್ಧರಿಸಿದ್ದು ತಪು್ಪ ಎಂದು ಸ್ಪಷ್ಟಪಡಿಸಿದರು. ಈ ಯೋಜನೆಯಡಿ ಪ್ರತಿ ಮನೆಗೆ ತಲಾ 10 ಲಕ್ಷ ರೂ. ವೆಚ್ಚ ಅಂದಾಜಿಸಿದ್ದು, ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 1.50 ಲಕ್ಷ ರೂ. ಭರಿಸುತ್ತವೆ. ಉಳಿದ 7 ಲಕ್ಷ ರೂ. ಭರಿಸುವುದು ಫಲಾನುಭವಿಗೆ ಹೊರೆಯಾಗುತ್ತದೆ. ಹಾಗಾಗಿ ಈ ಮೊತ್ತದಲ್ಲಿ 2-3 ಲಕ್ಷ ರೂ. ಕಡಿತ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಉದ್ದೇಶಿತ ಮನೆಗಳ ನಿರ್ವಣಕ್ಕೆ 8 ವಿಧಾನಸಭಾ ಕ್ಷೇತ್ರಗಳಲ್ಲಿ 332 ಎಕರೆ ಗುರುತಿಸಲಾಗಿದೆ. ಬಿಡಿಎ ತನ್ನ ವ್ಯಾಪ್ತಿಯ ಜಾಗದ ನೀಲಿನಕ್ಷೆ ಅನುಮೋದಿಸಿದ್ದು, ಅಗ್ನಿಶಾಮಕ ಸೇವಾ ಇಲಾಖೆ ಒಪ್ಪಿದೆ. ಕನಕಪುರ, ನೆಲಮಂಗಲ ಮತ್ತು ಆನೇಕಲ್ ಪ್ರಾಧಿಕಾರಗಳ ಅನುಮತಿ ನಿರೀಕ್ಷಿಸಲಾಗಿದೆ ಎಂದರು.

ನೈಜವೆಂದಾದರೆ ಹಣ ಪಾವತಿ

ವಿವಿಧ ವಸತಿ ಯೋಜನೆಯಡಿ ಅಕ್ರಮ ತಡೆಯಲು ಹಣ ಬಿಡುಗಡೆ ಮಾಡಿಲ್ಲ. ಒಟ್ಟು 3.47 ಲಕ್ಷ ಮನೆಗಳಿಗೆ 3,000 ಕೋಟಿ ರೂ. ಪಾವತಿಸಬೇಕಿದ್ದು, ಸರ್ಕಾರ 2,000 ಕೋಟಿ ರೂ. ಬಿಡುಗಡೆ ಮಾಡಿದೆ. ಆಯಾ ಜಿಲ್ಲಾಧಿಕಾರಿ, ಜಿಪಂ ಸಿಇಒಗಳು ತಪಾಸಣೆ ಮಾಡಿ ನೈಜವೆಂದು ಸರ್ಟಿಫಿಕೇಟ್ ನೀಡಿದ ತಕ್ಷಣ ಹಣ ಬಿಡುಗಡೆಗೆ ಬದ್ಧವೆಂದು ಸೋಮಣ್ಣ ಹೇಳಿದರು.

ಬೆಂಗಳೂರಿನ ಕೊಳೆಗೇರಿಗಳಲ್ಲಿ ಬಾಂಗ್ಲಾದೇಶದಿಂದ ಬಂದವರು ಅಕ್ರಮವಾಗಿ ನೆಲೆಸಿದ್ದಾರೆಯೆ? ಎನ್ನುವುದು ಸೂಕ್ಷ್ಮ ವಿಷಯ. ಮಹಾನಗರ ಪಾಲಿಕೆ ಸಮೀಕ್ಷೆ ನಡೆಸಿದ್ದು, ಕಾನೂನು ಚೌಕಟ್ಟಿನೊಳಗೆ ಕ್ರಮಕೈಗೊಳ್ಳುತ್ತಾರೆ. | ವಿ.ಸೋಮಣ್ಣ ವಸತಿ ಸಚಿವ