ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪಿಯು ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ನಗರದ ಬಹುತೇಕ ಎಲ್ಲ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಮತ್ತು ಪಾಲಕರು ಸರತಿ ಸಾಲಿನಲ್ಲಿ ನಿಂತು ಪ್ರವೇಶಕ್ಕೆ ಅರ್ಜಿ ಸ್ವೀಕರಿಸುತ್ತಿರುವುದು ಮಂಗಳವಾರ ಕಂಡುಬಂದಿತು.
ಮಲ್ಲೇಶ್ವರದ ಎಂಇಎಸ್, ಬಸವನಗುಡಿ ನ್ಯಾಷನಲ್ ಕಾಲೇಜು, ಹನುಮಂತನಗರ ಪಿಇಎಸ್ ಕಾಲೇಜು, ಮಹಾವೀರ್ ಜೈನ್, ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಕೋಟೆ ಕಾಲೇಜು ಸೇರಿ ವಿವಿಧ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಮತ್ತು ಪಾಲಕರು ಕ್ಯೂ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕರೊನಾ ಕಾರಣದಿಂದ ಸಹಪಾಠಿಗಳನ್ನು ಭೇಟಿಯಾಗಿ ತಿಂಗಳುಗಳು ಕಳೆದಿದ್ದವು. ಅರ್ಜಿ ಪಡೆಯುವ ನೆಪದಲ್ಲಿ ಭೇಟಿಯಾಗಿ ಫಲಿತಾಂಶದ ಬಗ್ಗೆ ಪರಸ್ಪರ ಸಂತೋಷ ಹಂಚಿಕೊಂಡರು.
ಪಿಯು ಕಾಲೇಜುಗಳು ಯಾವಾಗ ಆರಂಭವಾಗಲಿವೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಆದರೂ ದಾಖಲಾತಿ ಪ್ರಕ್ರಿಯೆ ಆರಂಭಿಸುತ್ತಿರುವುದರಿಂದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳು ಅರ್ಜಿ ಪಡೆಯುತ್ತಿದ್ದಾರೆ.
ಮಾರ್ಗಸೂಚಿ ಬಿಡುಗಡೆಗೆ ಒತ್ತಾಯ
ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿರುವುದರಿಂದ ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲು ಮಾರ್ಗಸೂಚಿ ಬಿಡುಗಡೆ ಮಾಡುವಂತೆ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೂ ಬರುವ ಮೊದಲೇ ಬಹುತೇಕ ಖಾಸಗಿ ಪಿಯು ಕಾಲೇಜುಗಳು ದಾಖಲಾತಿ ಪ್ರಕ್ರಿಯೆ ಪೂರ್ಣ ಗೊಳಿಸಿವೆ. ಇನ್ನು ಕೆಲವು ಕಾಲೇಜುಗಳು ಮಂಗಳವಾರ ಆರಂಭಿಸಿವೆ. ಆದರೆ, ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳು ವಿದ್ಯಾರ್ಥಿಗಳ ದಾಖಲಾತಿಗೆ ಇಲಾಖೆಯ ಅನುಮತಿ ಬೇಕಿರುವುದರಿಂದ ಮಾರ್ಗಸೂಚಿ ಬಿಡá-ಗಡೆಯಾದ ನಂತರವೇ ಪ್ರವೇಶ ಪ್ರಕ್ರಿಯೆ ಆರಂಭಿಸಲು ಸಾಧ್ಯ. ಹೀಗಾಗಿ ಪ್ರವೇಶ ಮಾರ್ಗಸೂಚಿಗಾಗಿ ಸಂಘ ಒತ್ತಾಯಿಸಿದೆ.
ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಆದಷ್ಟು ಬೇಗ ಆರಂಭಿಸಬೇಕು. ಇದಕ್ಕಾಗಿ ಮಾರ್ಗಸೂಚಿಯನ್ನು ಇಲಾಖೆ ಬಿಡುಗಡೆ ಮಾಡಬೇಕು. ಅಲ್ಲದೆ, ಕರೊನಾ ನಿಯಂತ್ರಣ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರನ್ನು ಬಿಡುಗಡೆ ಮಾಡಿ ದಾಖಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಪಿಯು ಇಲಾಖೆ ನಿರ್ದೇಶಕರಿಗೆ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಮನವಿ ಮಾಡಿದ್ದಾರೆ.