| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿನ ಕಲ್ಲು ಗಣಿ ಕ್ವಾರಿಗಳಿಗೆ ನಿಯಮಗಳ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ವಿಧಿಸಿರುವ ಬಹುದೊಡ್ಡ ಮಟ್ಟದ ದಂಡದ ಬಾಕಿ ಹಣ ವಸೂಲಿ ಮಾಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಈ ಮೊತ್ತ ಸರ್ಕಾರದ ಪಾಲಿಗೆ ಕನ್ನಡಿಯೊಳಗಿನ ಗಂಟಿನಂತಾಗಿದೆ.
ಕಲ್ಲು ಕ್ವಾರಿಗಳಿಗೆ ನಿಯಮದಲ್ಲಿರುವ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು ದಂಡ ವಿಧಿಸಲು ಅವಕಾಶವಿದೆ. ಅದರಂತೆ ವಿಧಿಸಿರುವ ಮೊತ್ತವೇ ಬೃಹದಾಕಾರವಾಗಿ ಬೆಳೆದಿದ್ದು ಅದನ್ನು ವಸೂಲಿ ಮಾಡಲಾಗದೇ ಸರ್ಕಾರ ಕೈಚೆಲ್ಲಿದೆ. ರಾಜ್ಯ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ದಂಡದ ಮೊತ್ತ ವಸೂಲಿಯಾಗಿದ್ದರೆ ಸರ್ಕಾರ ಉಸಿರಾಟಬಹುದಾಗಿದೆ. ಆದರೆ ವಸೂಲಿ ಹೇಗೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಎಷ್ಟಿದೆ ಮೊತ್ತ?: ರಾಜ್ಯದಲ್ಲಿ ಸುಮಾರು 4 ಸಾವಿರ ಕಲ್ಲು ಕ್ವಾರಿಗಳಿವೆ. ಅದರಲ್ಲಿ ಒಂದಷ್ಟು ಅಕ್ರಮ ಕ್ವಾರಿಗಳು ನಡೆಯುತ್ತಿವೆ. ಬಹುತೇಕ ಕ್ವಾರಿಗಳಲ್ಲಿ ನಿಯಮಗಳ ಪಾಲನೆ ಆಗುವುದಿಲ್ಲ. ಇತ್ತೀಚೆಗೆ ಕೆಲವು ಕಡೆಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದೇ ಅವಘಡಗಳು ಸೃಷ್ಟಿಯಾಗಿದ್ದವು. ಇಂತಹ ಕ್ವಾರಿಗಳಿಗೆ ವಿಧಿಸಿರುವ ದಂಡದ ಮೊತ್ತ ಸುಮಾರು 6200 ಕೋಟಿ ರೂ. ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಹಣವನ್ನು ವಸೂಲಿ ಮಾಡಬೇಕಾಗಿದೆ.
ಮಾಲೀಕರ ವಿರೋಧ: ಯಾವುದೇ ನಿಯಮ ಉಲ್ಲಂಘನೆಗೆ ಐದು ಪಟ್ಟು ದಂಡ ವಸೂಲಿ ಮಾಡಬಹುದು ಎಂಬುದಕ್ಕೆ ಕ್ವಾರಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ರೀತಿಯಲ್ಲಿ ದಂಡ ಹಾಕುವ ಪದ್ಧತಿಯೇ ಅವೈಜ್ಞಾನಿಕ ಹಾಗೂ ಯಾವುದೇ ರಾಜ್ಯದಲ್ಲಿಯೂ ಇಲ್ಲ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ದಂಡ ಹಾಕಿದ್ದಾರೆ. ಆದ್ದರಿಂದ ನಿಯಮ ಬದಲಾವಣೆ ಆಗಬೇಕು ಎಂಬ ಒತ್ತಾಯವನ್ನು ಸರ್ಕಾರದ ಮೇಲೆ ಮಾಡಿದ್ದಾರೆ.
ದಂಡ ವಿಧಿಸಿರುವ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಉದಾಹರಣೆಗಳು ಇವೆ. ಈಗ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕಾಗಿದೆ. ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದೆ. ಅತ್ತ ಕ್ವಾರಿಗಳ ಮಾಲೀಕರಲ್ಲಿ ಬಹುತೇಕರು ಪ್ರಭಾವಿಗಳಿದ್ದಾರೆ. ಒಂದೆಡೆ ನಿಯಮ ಮತ್ತೊಂದೆಡೆ ಪ್ರಭಾವಿಗಳಿರುವುದರಿಂದ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳುವುದು ಕಷ್ಟದ ಸ್ಥಿತಿಯಾಗಿದೆ.
ಉಪ ಸಮಿತಿಯಲ್ಲಿ ಚರ್ಚೆ: ಗಣಿ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಸಲುವಾಗಿ ರಚನೆಯಾಗಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿಯೂ ಈ ವಿಚಾರ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ವಸೂಲಿ ಮಾಡದೇ ಕೈ ಬಿಡುವುದಕ್ಕೂ ಸಾಧ್ಯವಿಲ್ಲ, ವಸೂಲಿ ಮಾಡಲು ಆಗುತ್ತಿಲ್ಲ. ಆದ್ದರಿಂದ ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂಬ ವಿಸõತ ಚರ್ಚೆಯಾಗಿದ್ದರೂ ಅಂತಿಮ ತೀರ್ವನಕ್ಕೆ ಬರಲು ಸಾಧ್ಯವಾಗಿಲ್ಲ.
ಒಂದು ಅವಧಿ ತೀರುವಳಿ: ಈ ವಿಷಯವನ್ನು ಸಚಿವ ಸಂಪುಟದ ಮುಂದೆ ತಂದು ಒಂದು ಅವಧಿ ತೀರುವಳಿ ಮಾಡುವ ಮೂಲಕ ಎಷ್ಟು ಸಾಧ್ಯವೋ ಅಷ್ಟು ವಸೂಲಿ ಮಾಡುವ ಬಗ್ಗೆ ಚರ್ಚೆಯಾಗಿದೆ. ಆದರೆ ಸ್ಪಷ್ಟ ತೀರ್ವನವನ್ನು ಸಚಿವ ಸಂಪುಟದಲ್ಲಿಯೇ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ಡ್ರೋನ್ ಸರ್ವೆ: ಹಿಂದೆ ದಂಡ ವಿಧಿಸುವಾಗ ಸ್ಪಷ್ಟವಾದ ಯಾವುದೇ ನಿಯಮಗಳು ಇರಲಿಲ್ಲ. ಸ್ಪಷ್ಟವಾದ ಮಾಹಿತಿಯೂ ಇರಲಿಲ್ಲ. ಆದ್ದರಿಂದ ಈಗ ಪ್ರತಿಯೊಂದು ಕ್ವಾರಿಗಳಲ್ಲಿಯೂ ಡ್ರೋನ್ ಸರ್ವೆ ಮಾಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರದ ಕ್ಯಾಸ್ರಾಕ್ ಎಂಬ ಸಂಸ್ಥೆಗೂ ಜವಾಬ್ದಾರಿ ನೀಡಲಾಗಿದೆ. ಅದರಿಂದ ನಿಖರವಾದ ಮಾಹಿತಿ ಸಿಗುತ್ತದೆ. ಅದರ ಆಧಾರದಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ನಿರ್ದಿಷ್ಟ ಪ್ರಮಾಣದ ದಂಡ ವಿಧಿಸಲು ಅವಕಾಶ ಇರುತ್ತದೆ.
ಈ ಮೊತ್ತವನ್ನು ಹೇಗೆ ವಸೂಲಿ ಮಾಡಬೇಕು ಎಂಬುದನ್ನು ಸಂಪುಟ ಉಪಸಮಿತಿ ಸಭೆಯಲ್ಲಿಯೂ ರ್ಚಚಿಸಿದ್ದೇವೆ. ಸಂಪುಟದಲ್ಲಿಯೂ ಚರ್ಚೆ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗದಂತೆ ಮಾಡಲು ಪ್ರತಿಯೊಂದು ಕ್ವಾರಿಯ ಡ್ರೋನ್ ಸಮೀಕ್ಷೆ ಮಾಡಲು ನಿರ್ಧರಿಸಲಾಗಿದೆ. | ಹಾಲಪ್ಪ ಆಚಾರ್ ಗಣಿ ಮತ್ತು ಭೂ ವಿಜ್ಞಾನ ಸಚಿವ
ನಿಯಮದಲ್ಲಿ ಬದಲಾವಣೆ: ಕಲ್ಲು ಕ್ವಾರಿಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಬದಲಾವಣೆ ಮಾಡಲು ಈಗಾಗಲೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ನಿಯಮಗಳನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ದಂಡದ ಸ್ವರೂಪದಲ್ಲಿಯೂ ಬದಲಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.