ನ್ಯೂಸ್

ಜಗಳ ಆಡಿದ್ದಕ್ಕೆ ಬ್ಲ್ಯಾಕ್​ ಟೀನಲ್ಲಿ ವಿಷ ಬೆರೆಸಿ ಆಪ್ತ ಸ್ನೇಹಿತನನ್ನೇ ಕೊಲೆ ಮಾಡಲು ಯತ್ನಿಸಿದ ಯುವಕ! Black Tea

Black Tea : ಬ್ಲ್ಯಾಕ್​ ಟೀನಲ್ಲಿ ವಿಷ ಬೆರೆಸಿ ಆಪ್ತ ಸ್ನೇಹಿತನನ್ನೇ ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

ಸಂತ್ರಸ್ತನನ್ನು ಸುಂದರನ್​ ಎಂದು ಗುರುತಿಸಲಾಗಿದೆ. ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಕಲಪಟ್ಟುಕುನ್ನು ಮೂಲದ ಅಜಯ್​ ಎಂಬಾತನನ್ನು ಬಂಧಿಸಲಾಗಿದೆ. ಸಂತ್ರಸ್ತ ಸುಂದರನ್ ಟ್ಯಾಪಿಂಗ್ ಕೆಲಸಗಾರ. ಯಾವುದೋ ಒಂದು ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯಿತು. ಇದೇ ಜಗಳ ದ್ವೇಷಕ್ಕೆ ತಿರುಗಿ ಕೊಲೆ ಮಾಡಲು ಯತ್ನಿಸುವ ಮಟ್ಟಕ್ಕೆ ಬೆಳೆದಿದೆ.

ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಫ್ಲಾಸ್ಕ್‌ನಲ್ಲಿ ಬ್ಲ್ಯಾಕ್​ ಟೀ ಹಾಕಿಕೊಂಡು ಸುಂದರನ್​ ಹೋಗುತ್ತಿದ್ದ. ಅದೇ ರೀತಿ ಆಗಸ್ಟ್ 10 ರಂದು, ಆತ ಎಂದಿನಂತೆ ಕೆಲಸಕ್ಕೆ ಹೋದಾಗ, ಒಂದು ಫ್ಲಾಸ್ಕ್‌ನಲ್ಲಿ ಬ್ಲ್ಯಾಕ್​ ಟೀ ತೆಗೆದುಕೊಂಡು ಹೋಗಿದ್ದಾನೆ. ಕೆಲಸದ ಮಧ್ಯದಲ್ಲಿ ಅದನ್ನು ಕುಡಿದಾಗ, ರುಚಿಯಲ್ಲಿ ವ್ಯತ್ಯಾಸ ಕಂಡುಬಂದಿದೆ.

ಚಹಾದಲ್ಲಿ ಬೇರೆ ಏನಾದರೂ ಮಿಶ್ರಣವಾಗಿರಬಹುದು ಅಂತ ಅದನ್ನು ಸುರಿದಿದ್ದಾನೆ. ಮರುದಿನದಿಂದ ಆತ ಪ್ಲಾಸ್ಟಿಕ್ ಬಾಟಲಿಯಲ್ಲಿ ಬ್ಲ್ಯಾಕ್​ ಟೀ ತೆಗೆದುಕೊಂಡು ಹೋಗಲು ಪ್ರಾರಂಭಿಸಿದ್ದಾನೆ. ಆದರೆ, ಆಗಸ್ಟ್ 14 ರಂದು ಮತ್ತೊಮ್ಮೆ ಚಹಾದ ರುಚಿ ವಿಭಿನ್ನವಾಗಿರುವುದನ್ನು ಸುಂದರನ್​ ಗಮನಿಸಿದ್ದಾನೆ.

ಬಳಿಕ ಬಾಟಲಿಯಿಂದ ಟೀ ಅನ್ನು ಸುರಿದು ಪರೀಕ್ಷಿಸಿದಾಗ, ಅದರ ಬಣ್ಣ ಬದಲಾವಣೆ ಆಗಿರುವುದು ಕಂಡುಬಂದಿದೆ. ಇದರಿಂದ ಅನುಮಾನಗೊಂಡ ಸುಂದರನ್​ ಪೊಲೀಸರಿಗೆ ದೂರು ದಾಖಲಿಸಿದರು. ನಂತರದ ತನಿಖೆಯಲ್ಲಿ ವಿಷ ಬೆರೆಸಲಾಗಿದೆ ಮತ್ತು ಅದರ ಹಿಂದೆ ಅಜಯ್ ಇದ್ದಾನೆ ಎಂದು ಗೊತ್ತಾಗಿದೆ.

ಅಜಯ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)