ನಿಂಬೆಗೊಂದಿ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಎಎಸ್ಪಿ ಅನಿಲ್‌ಕುಮಾರ್ ಭೂಮರೆಡಿ, ಗ್ರಾಮಸ್ಥ ಮಹಾದೇವಪ್ಪ, ಸತೀಶ್ ಮತ್ತಿತರರು ಉದ್ಘಾಟಿಸಿದರು. ಕಾವೇರಿ, ರಂಗಪ್ಪ ಇತರರಿದ್ದರು.  
ನ್ಯೂಸ್

ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಅವಶ್ಯ

ಹೊಳೆಹೊನ್ನೂರು: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಿದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆ. ಈ ದಿಸೆಯಲ್ಲಿ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.

ಸಮೀಪದ ನಿಂಬೆಗೊಂದಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮಸ್ಥರಿಂದ ಅನೇಕ ಶಾಲೆಗಳಿಗೆ ಮರುಜೀವ ಬಂದಿದೆ ಎಂದರು.

ಶಾಲೆಗಳಲ್ಲಿ ಸಿಬ್ಬಂದಿ ಒಗ್ಗಟ್ಟಾಗಿದ್ದರೆ ಮಾತ್ರ ಶಾಲೆಗಳು ಅಭಿವೃದ್ಧಿಯಾಗುತ್ತವೆ. ತಾಯಂದಿರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವತ್ತ ಗಮನ ಹರಿಸಬೇಕಿದೆ. ಮಕ್ಕಳನ್ನು ಶಾಲೆ ಕಳುಹಿಸಿದರೆ ಜವಾಬ್ದಾರಿ ಮುಗಿಯುದಿಲ್ಲ. ಅವರ ಪ್ರಗತಿ ಬಗ್ಗೆ ತಿಳಿಯಲು ಶಿಕ್ಷಕರೊಂದಿಗೆ ಸಂಪರ್ಕದಲ್ಲಿ ಇರಬೇಕು. ಶಿಕ್ಷಕರು ಆತ್ಮಪೂರ್ವಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಎಸ್ಪಿ ಅನಿಲ್‌ಕುಮಾರ್ ಭೂಮರೆಡ್ಡಿ, ಗ್ರಾಮಸ್ಥರ ಸಹಕಾರವಿದ್ದರೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಏಳಿಗೆಯಾಗುವುದರಲ್ಲಿ ಸಂದೇಹವೇ ಇಲ್ಲ. ಗ್ರಾಮಸ್ಥರು ಗ್ರಾಮದ ಶ್ರೇಯೊಭಿವೃದ್ಧಿಗೂ ಶ್ರಮಿಸಬೇಕು. ಶೈಕ್ಷಣಿಕ ಸೇವೆಗಳಿಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಸುಂದರ ಕಾರ್ಯಕ್ರಮಗಳು ಯಶಸ್ವಿಯಾದರೆ ಆಯೋಜಕರಿಗೆ ನೆಮ್ಮದಿ ಸಿಗುತ್ತದೆ. ಮಕ್ಕಳ ಉತ್ಸಾಹಕ್ಕೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ. ವಿದ್ಯಾರ್ಥಿಗಳು ಓದಿದ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು. ಪ್ರತಿಭಾವಂತರು ದೇಶದ ಬೆನ್ನೆಲುಬು. ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವಗಳು ಸಹಕಾರಿ ಎಂದು ಹೇಳಿದರು.

ಬಿಇಒ ನಾಗೇಂದ್ರಪ್ಪ, ಗ್ರಾಮದ ಮುಖಂಡ ಮಹಾದೇವಪ್ಪ, ಶಾಲಾ ಸಮಿತಿ ಅಧ್ಯಕ್ಷ ಸತೀಶ್, ಮುಖ್ಯಶಿಕ್ಷಕ ನಾಗರಾಜಪ್ಪ, ಸಂಪನ್ಮೂಲ ವ್ಯಕ್ತಿ ಪಂಚಪ್ಪ, ನಿವೃತ್ತ ಶಿಕ್ಷಕ ರಂಗಪ್ಪ, ಪ್ರಕಾಶ್, ಸುರೇಶ್, ನಾಗರಾಜಪ್ಪ, ಕಾವೇರಿ, ಎಸ್.ಪಿ ರಾಜು, ಶಿವು, ಮಂಜುನಾಥ್, ಮಾರಪ್ಪ ಇತರರಿದ್ದರು.