ನ್ಯೂಸ್

ಪುಟಿನ್ ಚೆನ್ನಾಗಿ ಬಣ್ಣ ಬಣ್ಣದ ಮಾತನಾಡುತ್ತಾರೆ; ನಂತರ ಎಲ್ಲರ ಮೇಲೆ ಬಾಂಬ್ ಹಾಕ್ತಾರೆ; ಡೊನಾಲ್ಡ್​ ಟ್ರಂಪ್| trump

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತೊಮ್ಮೆ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಉಕ್ರೇನ್ ವಿರುದ್ಧದ ಆಕ್ರಮಣದ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೋಸಗೊಳಿಸುವ ತಂತ್ರಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ. ಪುಟಿನ್ ಬೆಳಗ್ಗೆ ಬಣ್ಣ ಬಣ್ಣದ ಮಾತಾಡಿ, ನಂತರ ಬಾಂಬ್ ಹಾಕುವ ವ್ಯಕ್ತಿ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್​ ಹೇಳಿದ್ದೇನು.?

ವ್ಲಾಡಿಮಿರ್‌ ಪುಟಿನ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೆಂಡವಾಗಿದ್ದಾರೆ. ನಾನು ರಷ್ಯಾದ ನಾಯಕನ ಬಗ್ಗೆ ನಿರಾಶೆಗೊಂಡಿದ್ದೇನೆ. ಅವರು ಬೆಳಗ್ಗೆ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾರೆ. ನಂತರ ಸಂಜೆ ಎಲ್ಲರ ಮೇಲೂ ಬಾಂಬ್‌ ಹಾಕುತ್ತಾರೆ ಎಂದು ಡೊನಾಲ್ಡ್‌ ಟ್ರಂಪ್‌ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮಾಸ್ಕೋ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಲು ಸಜ್ಜಾಗಿರುವ ಡೊನಾಲ್ಡ್‌ ಟ್ರಂಪ್‌, ಯುದ್ಧ ಕೊನೆಗೊಳಿಸದಿದ್ದರೆ ಪುಟಿನ್‌ ತೀವ್ರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ರಷ್ಯಾ ನಡುವೆ ರಾಜತಾಂತ್ರಿಕ ಕೋಲಾಹಲ ಏರ್ಪಟ್ಟಿದೆ. ಅಮೆರಿಕದ ವಿಶೇಷ ರಾಯಭಾರಿ ಉಕ್ರೇನ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಡೊನಾಲ್ಡ್‌ ಟ್ರಂಪ್ ಅವರು ವಾಷಿಂಗ್ಟನ್‌ನಲ್ಲಿ ನ್ಯಾಟೋ ಕಾರ್ಯದರ್ಶಿ ಜನರಲ್ ಮಾರ್ಕ್ ರುಟ್ಟೆ ಅವರನ್ನು ಭೇಟಿ ಮಾಡಲಿದ್ದಾರೆ. ಉಕ್ರೇನ್‌ಗೆ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ಮತ್ತೆ ಗುಡುಗಿರುವ ಟ್ರಂಪ್‌, ಮಾಸ್ಕೋ ಮೇಲೆ ಹೊಸ ನಿರ್ಬಂಧಗಳನ್ನು ಹೇರುವ ಸುಳಿವು ನೀಡಿದ್ದಾರೆ.

(ಏಜೆನ್ಸೀಸ್)

ಅಮೆರಿಕದ ಚುನಾವಣಾ ಪ್ರಚಾರದ ಸಮಯದಲ್ಲಿ, ಜನವರಿಯಲ್ಲಿ ಶ್ವೇತಭವನಕ್ಕೆ ಮರಳುವ ಮೊದಲು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದರು. ಆದರೆ ಯುದ್ಧವನ್ನು ಕೊನೆಗೊಳಿಸಲು ಅಥವಾ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಪುಟಿನ್ ಅವರನ್ನು ಮನವೊಲಿಸುವ ಅವರ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ.