ನ್ಯೂಸ್

ಪುತಿನ್​ಗೆ ಬೈಡೆನ್​ ಗಂಭೀರ ಎಚ್ಚರಿಕೆ: ದೂರವಾಣಿ ಮೂಲಕ ಒಂದು ತಾಸು ಮಾತುಕತೆ

ವಾಷಿಂಗ್ಟನ್​/ಮಾಸ್ಕೊ: ಉಕ್ರೇನ್​ ಗಡಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಸೈನಿಕರನ್ನು ನಿಲ್ಲಿಸಿ ಪೂರ್ವ ಯುರೋಪ್​ನಲ್ಲಿ ಉದ್ವಿಗ್ನತೆಗೆ ಕಾರಣವಾಗಿರುವ ರಷ್ಯಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಖುದ್ದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಜತೆಗೆ ಶನಿವಾರ ದೂರವಾಣಿಯಲ್ಲಿ 62 ನಿಮಿಷ ಮಾತನಾಡಿದ್ದು, ಉಕ್ರೇನ್​ ವಿಷಯದಲ್ಲಿ ರಷ್ಯಾ ಆಕ್ರಮಣಕಾರಿಯಾದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಖಡಕ್ಕಾಗಿ ಹೇಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಈ ಮಾತುಕತೆಯು ರಾಜತಾಂತ್ರಿಕ ಶಿಷ್ಟಾಚಾರದ ಚೌಕಟ್ಟಿನಲ್ಲಿ ವಸ್ತುನಿಷ್ಠವಾಗಿತ್ತು. ಹೇಳಬೇಕಾದ ಸಂದೇಶವನ್ನು ಚುಟುಕಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಿದರು ಎಂದು ಹೇಳಿದೆ.

ಉಕ್ರೇನ್​ನಲ್ಲಿ ಆತಂಕ ಹೆಚ್ಚಿಸುವಂತಹ ಸೇನಾ ಜಮಾವಣೆಯನ್ನು ರಷ್ಯಾ ಮಾಡುತ್ತಿರುವುದು ಪ್ರಾದೇಶಿಕದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಕೂಡ ಕಳವಳಕಾರಿ ನಡೆ. ಇದನ್ನು ಇಲ್ಲಿಗೆ ಕೊನೆಗಾಣಿಸಬೇಕು. ಆಕ್ರಮಣಶೀಲವಾದರೆ ಅದು ಮಾನವ ಸಂಕಟವನ್ನು ಹೆಚ್ಚಿಸುವ ಮತ್ತು ಜಾಗತಿಕವಾಗಿ ರಷ್ಯಾ ಅವಮಾನಕ್ಕೆ ಗುರಿಯಾಗಬೇಕಾಗುತ್ತದೆ. ಅಮೆರಿಕವು ರಾಜತಾಂತ್ರಿಕವಾದ ನಡೆ ಮತ್ತು ಇತರ ಯಾವುದೇ ಸನ್ನಿವೇಶವನ್ನು ಎದುರಿಸಲು ಸಮಾನವಾಗಿ ಸಿದ್ಧವಾಗಿದೆ ಎಂದು ಬೈಡೆನ್​ ಹೇಳಿದ್ದಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.

ಸೇನಾಬಲ ಹೆಚ್ಚಿದ ರಷ್ಯಾ

ರಷ್ಯಾದ ಉಕ್ರೇನ್​ ಸಮೀಪ ಪಡೆಗಳನ್ನು ಜಮಾಯಿಸಿರುವುದಲ್ಲದೆ ಜಂಟಿ ಕವಾಯತುಗಳನ್ನು ನಡೆಸುತ್ತಿರುವುದು ಉಪಗ್ರಹ ಚಿತ್ರಗಳಿಂದ ತಿಳಿದು ಬಂದಿದೆ. ಹಿಂದಿನ ಸೋವಿಯತ್​ ಒಕ್ಕೂಟದ ಬೆಲಾರಸ್​ನಲ್ಲಿ ಹಾಗೂ ಕಪು$್ಪ ಸಮುದ್ರದಲ್ಲಿ 30 ನೌಕಾಗಳಿಂದ ಕಸರತ್ತುಗಳ್ನು ರಷ್ಯಾ ನಡೆಸುತ್ತಿದೆ ಎಂದು ಅಮೆರಿಕ ಮೂಲದ ಮ್ಯಾಕ್ಸಾರ್​ ಟೆಕ್ನಾಲಜೀಸ್​ ತಿಳಿಸಿದೆ. ಕ್ರಿಮಿಯಾ, ಪಶ್ಚಿಮ ರಷ್ಯಾ ಮತ್ತು ಬೆಲರಾಸ್​ನ ಹಲವು ಸ್ಥಳಗಳಲ್ಲಿ ಈ ಪಡೆಗಳು ಜಮಾವಣೆಗೊಳ್ಳುತ್ತಿರುವುದು ಕಂಡುಬಂದಿದೆ. ಉಕ್ರೇನ್​ ಗಡಿಯಲ್ಲಿ ರಷ್ಯಾದ ಸುಮಾರು 1,30,000 ಸೈನಿಕರು ಸನ್ನದ್ಧ ಸ್ಥಿತಿಯಲ್ಲಿ ಸಜ್ಜಾಗಿದ್ದಾರೆ ಎಂದು ಅಮರಿಕ ಅಂದಾಜು ಮಾಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಪೋಲೆಂಡ್​ಗೆ 30 ಸಾವಿರ ಟ್ರೂಪ್​ ಸೇನೆಯನ್ನು ರವಾನಿಸಿದೆ. ಈ ತಿಂಗಳ ಆರಂಭದಲ್ಲೇ ನ್ಯಾಟೋ ಪಡೆಗಳು ಪೂರ್ವ ಯುರೋಪ್​ ದೇಶಗಳನ್ನು ತಲುಪಿವೆ.

ಕೂಡಲೇ ಹೊರಟು ಬನ್ನಿ ಎಂದ ಬೈಡೆನ್​

ರಷ್ಯಾ&ಉಕ್ರೇನ್​ ನಡುವಿನ ಬಿಕ್ಕಟ್ಟು ಯಾವ ಕ್ಷಣದಲ್ಲಾದರೂ ಉಲ್ಬಣಗೊಳ್ಳಬಹುದು. ಆದ್ದರಿಂದ ಉಕ್ರೇನ್​ನಲ್ಲಿರುವ ಅಮೆರಿಕನ್ನರು ಶ್ರೀವೇ ತಾಯ್ನಾಡಿಗೆ ಮರಳಬೇಕೆಂದು ಅಧ್ಯಕ್ಷ ಜೋ ಬೈಡೆನ್​ ಶುಕ್ರವಾರವೇ ಕರೆ ನೀಡಿದ್ದರು. ರಷ್ಯಾ ಮತ್ತು ಉಕ್ರೇನ್​ ನಡುವಿನ ಬಿಕ್ಕಟ್ಟು ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಹಿನ್ನೆಲ್ಲೆಯಲ್ಲಿ ತನ್ನ ಕೆಲವು ರಾಜತಾಂತ್ರಿಕರನ್ನು ವಾಪಸ್​ ಕರೆಸಿಕೊಂಡಿರುವುದಾಗಿ ರಷ್ಯಾ ಶನಿವಾರ ಪ್ರಕಟಿಸಿದೆ. ಆದರೆ ನೆರೆ ರಾಷ್ಟ್ರದ ಮೇಲೆ ಆಕ್ರಮಣ ಮಾಡುವ ಯಾವುದೇ ಯೋಜನೆಯಿಲ್ಲ ಎಂದು ಸ್ಪಷ್ಟಪಡಿಸಿದೆ.